ವಿಜಯನಗರ : ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿದ್ದು, ಇಂದಿನ ಸಮಾಜ ವಿಜ್ಞಾನ ಪರೀಕ್ಷೆಯನ್ನು ವಿದ್ಯಾರ್ಥಿಯೋರ್ವನು ತನ್ನ ತಂದೆಯ ಸಾವಿನ ನೋವಿನ್ನಲ್ಲೇ ಬರೆದ ಮನಕಲಕುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಇಲ್ಲಿನ ಟಿಬಿ ಡ್ಯಾಂನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹರಿಧರನ್ ನ ತಂದೆ ನಿನ್ನೆ ಅನಾರೋಗ್ಯದಿಂದ ತಮಿಳುನಾಡಿನಲ್ಲಿ ಅಸುನೀಗಿದ್ದಾರೆ.ಇಂದು ಅಂತ್ಯಕ್ರಿಯೆ ನಡೆದಿದ್ದು, ಇತ್ತ ಪರೀಕ್ಷೆಗೆ ಹರಿಧರನ್ ಹಾಜರಾಗಿದ್ದಾನೆ.
ವಿದ್ಯಾರ್ಥಿಯ ತಂದೆ ಸೆಲ್ವಕುಟ್ಟಿ ಆರೋಗ್ಯದಲ್ಲಿ ಏರುಪೇರಾದಾಗ ನಿನ್ನೆ ಅವರನ್ನು ತಮಿಳುನಾಡಿಲ್ಲ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹರಿಧರನ್ ಸಹ ತಂದೆಯನ್ನು ನಿನ್ನೆಯಷ್ಟೇ ಮಾತನಾಡಿಸಿ ಬಂದಿದ್ದ ಎಂದು ತಿಳಿದುಬಂದಿದೆ. ಶಿಕ್ಷಕರು ಮತ್ತು ಕುಟುಂಬದ ಇತರೆ ಸದಸ್ಯರು ಹರಿಧರನ್ಗೆ ಧೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದ್ದಾರೆ.
ಕಳೆದ ಮಾ.21ರಂದು ಇದೇ ರೀತಿಯ ಘಟನೆಯೊಂದು ಕೊಪ್ಪಳದ ಗಂಗಾವತಿಯಲ್ಲಿ ನಡೆದಿತ್ತು. ಕೇಸರಹಟ್ಟಿ ಗ್ರಾಮದ ವಿದ್ಯಾರ್ಥಿ ಅಡಿವೆಯ್ಯ ಸ್ವಾಮಿ ಎಂಬುವವನ ಹೆತ್ತ ತಾಯಿಯು ಪರೀಕ್ಷೆ ದಿನದಂದೇ ಸಾವನ್ನಪ್ಪಿದ್ದರು. ಆ ನೋವಿನಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದ.