ಬಸವನಬಾಗೇವಾಡಿ: ಬಸವನಬಾಗೇವಾಡಿ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾತಿ ಗಣತಿ ಕಾರ್ಯದಲ್ಲಿ ನೋಡಲ್ ಅಧಿಕಾರಿ ಬಲರಾಮ ಲಮಾಣಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಎಸ್ ಹಿರೇಮನಿ ಅವರು ಜಂಟಿಯಾಗಿ ಪರಿಶೀಲಿಸಿದರು.

ಪಟ್ಟಣದ ನವನಗರ, ಹರಳಯ್ಯ ಕಾಲೋನಿ ಹಾಗೂ ಬಸವನಗರ ವ್ಯಾಪ್ತಿಯಲ್ಲಿ ಗಣತಿ ಕಾರ್ಯದಲ್ಲಿ ಭೇಟಿ ನೀಡಿದ ಅವರು ಗಣತಿದಾರರಿಂದ ಮಾಹಿತಿ ಪಡೆದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಎಸ್ ಹಿರೇಮನಿ ಮಾತನಾಡಿ, ಮನೆ ಮನೆಗೆ ಭೇಟಿ ಕೊಡುವ ಕಾರ್ಯ ಮೇ 25 ರವರೆಗೆ ಸಮೀಕ್ಷೆ ಕಾರ್ಯ ನಡೆಯಲಿದ್ದು. ಮೇ 26-28 ರವರೆಗೂ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ, ಯಾರಾದರೂ ಬಿಟ್ಟು ಹೋಗಿದ್ದರೆ ಶಿಬಿರಕ್ಕೆ ಬಂದು ಜಾತಿ ಹೇಳಬಹುದು, ಮತ್ತು ಮೇ 19 ರಿಂದ 28ರವರೆಗೆ ಆನಲ್ಯೆನ್ನಲ್ಲಿ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕೆಲಸಕ್ಕೆ ಎಂದು ಗುಳೇ ಹೋದವರು ಹೊರ ಗುಳಿಯದೇ ಜಾತಿ ಸಮೀಕ್ಷೆ ಯಲ್ಲಿ ಭಾಗವಹಿಸಬೇಕು. ಈ ಕುರಿತು ಡಂಗುರ ಸಾರುವ ಕಾರ್ಯಕ್ರಮ ಆಯೋಜಿಸಲಾಗುವುದು.
ಈಗಾಗಲೇ ಮೇ 18 ರವರೆಗೆ ಬಸವನಬಾಗೇ ವಾಡಿ, ಕೋಲ್ಹಾರ ಹಾಗೂ ನಿಡಗುಂದಿ ತಾಲೂಕುಗಳಲ್ಲಿ 62736 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು. ಅದರಲ್ಲಿ ಪರಿಶಿಷ್ಟ ಜಾತಿ 12121 ಮನೆಗಳು ಹಾಗೂ 50,615 ಇತರೆ ಮನೆಗಳ ಸಮೀಕ್ಷೆ ಆಗಿದೆ ಎಂದರು.




