ಸಿರುಗುಪ್ಪ : ಜೋಳ ಖರೀದಿ ಕೇಂದ್ರದಲ್ಲಿನ ಅವ್ಯವಹವಾರಗಳನ್ನು ಸರಿಪಡಿಸುವುದು, ಕಾಲುವೆ ಮುಖಾಂತರ ವೇದಾವತಿ ನದಿಗೆ ನೀರು ಬಿಡುವುದು ಮತ್ತು ಎಲ್.ಎಲ್.ಸಿ ಕಾಲುವೆ ನೀರು ಏಪ್ರಿಲ್ 10ರವರೆಗೆ ಹರಿಸುವಂತೆ ಆಗ್ರಹಿಸಿ ನಗರದ ತಾಲೂಕು ಕಛೇರಿಯ ಆವರಣದಲ್ಲಿ ಬಿಜೆಪಿ ಪಕ್ಷದಿಂದ ಸಾಂಕೇತಿಕ ಧರಣಿ ನಡೆಸಲಾಯಿತು.
ಮಾಜಿ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರು ಮಾತನಾಡಿ ಸರ್ಕಾರಿ ಬೆಂಬಲ ಬೆಲೆಯಲ್ಲಿ ಜೋಳ ಖರೀದಿ ಕೇಂದ್ರ ಆರಂಭವಾಗಿದೆ. ಆದರೆ ಅವ್ಯವಸ್ಥೆಯಿಂದ ಕೂಡಿದೆ. ಸಮಸ್ಯೆಯನ್ನು ಬಗೆಹರಿಸದೇ ಇಲಾಖೆಗಳ ಮೇಲೆ ಇಲಾಖೆಗಳು ಬೆರಳು ತೋರಿಸುತ್ತಾ ಕಾಲಹರಣ ಮಾಡುತ್ತಿವೆ.
ವೇದಾವತಿ(ಹಗರಿ) ನದಿಯು ನೀರಿಲ್ಲದೇ ಬತ್ತಿಹೋಗಿದ್ದು ನದಿ ಪಾತ್ರದಲ್ಲಿ ರೈತರು ಬೆಳೆದ ಭತ್ತವು ಒಣಗುವ ಸ್ಥಿತಿಯಲ್ಲಿದ್ದು ಗುಡದೂರು ಹತ್ತಿರದಲ್ಲಿ ಕಾಲುವೆ ನೀರು ವೇದಾವತಿ(ಹಗರಿ) ನದಿಗೆ ಹರಿಸಬೇಕು.
ಅಲ್ಲದೇ ಕಾಲುವೆ ನಂಬಿ ಭತ್ತ ನಾಟಿ ಮಾಡಿದ ರೈತರಿಗೂ ತುಂಗಾಭದ್ರ ಜಲಾಶಯದಿಂದ ಏಪ್ರಿಲ್ 10ನೇ ತಾರೀಖಿನವರೆಗೂ ಎಲ್.ಎಲ್.ಸಿ ಕಾಲುವೆ ನೀರು ಹರಿಸಬೇಕು.
ಇಲ್ಲದೇ ಹೋದಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಭತ್ತದ ಒಣಗಿ ಹೋಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ.
ಆದ್ದರಿಂದ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನವಹಿಸಿ ತಾಲೂಕಿನ ರೈತರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಬಿಜೆಪಿ ಪಕ್ಷದ ತಾಲೂಕಾಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ