ಧಾರವಾಡ : ವಿದ್ಯಾಕಾಶಿ ಧಾರವಾಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಚಲಿಸುತ್ತಿದ್ದ ಲಾರಿಯ ಚಕ್ರದ ಕೆಳಗಡೆಗೆ ಸಿಲುಕಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಘಟನೆ ನಡೆದಿದೆ.
ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ಕಿಶನ್ ಖಾನವಾಲೆ (30) ಮತ್ತು ಕಿರಣ ಖಡವಾಕರ್ (32) ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಛಿದ್ರಗೊಂಡು ಬಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಘಟನೆ ಬಗ್ಗೆ ಸ್ಥಳೀಯರು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ತೆರವುಗೊಳಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಮರಣೋತ್ತರ ಪರೀಕ್ಷೆ ಬಳಿಕ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.




