ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಿನ್ನೆ ತಡರಾತ್ರಿ ಟ್ರ್ಯಾಕ್ಟರ್-ಟ್ರೇಲರ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಹತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಚ್ವಾ ಗಡಿ ಬಳಿ ಸಂಭವಿಸಿದ ಅಪಘಾತದಲ್ಲಿ ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಟ್ರಾಕ್ಟರ್ ಟ್ರೈಲರ್ ವಾರಣಾಸಿ ಕಡೆಗೆ 13 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದಾಗ ಟ್ರಕ್ ನಿಯಂತ್ರಣ ತಪ್ಪಿ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 1 ಗಂಟೆ ಸುಮಾರಿಗೆ ಕಚ್ವಾ ಗಡಿ ಜಿಟಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ನಮಗೆ ಬಂದಿದೆ.. 13 ಜನರಿದ್ದ ಟ್ರ್ಯಾಕ್ಟರ್ ವಾರಣಾಸಿ ಕಡೆಗೆ ಹೋಗುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದಿದೆ. 13 ಮಂದಿಯಲ್ಲಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮಿರ್ಜಾಪುರದ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಕುಮಾರ್ ಸಿಂಗ್ ಹೇಳಿದ್ದಾರೆ.
ಗಾಯಾಳುಗಳಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 13 ದಿನಗೂಲಿ ಕಾರ್ಮಿಕರು ಭದೋಹಿ ಜಿಲ್ಲೆಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು.
ಅವರು ವಾರಣಾಸಿಯ ತಮ್ಮ ಗ್ರಾಮವಾದ ಮಿರ್ಜಾಮುರಾದ್‌ಗೆ ತೆರಳುವಾಗ ಘಟನೆ ನಡೆದಿದೆ. ಮೃತ ದೇಹಗಳನ್ನು ಶವಾಗಾರಕ್ಕೆ ಕಳುಹಿಸಲಾಗಿದ್ದು, ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪಟೇಲ್ ಹಾರೈಸಿದ್ದಾರೆ.