ಮಹಿಳೆಯೊಬ್ಬಳು ತನಗೆ ಸರ್ಕಾರಿ ನೌಕರಿ ದೊರೆಯುತ್ತಿದ್ದಂತೆ ಪತಿಯನ್ನು ತೊರೆದು ಮತ್ತೊಬ್ಬನೊಂದಿಗೆ ಮದುವೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರಿಂದ ಕಂಗಾಲಾಗಿರುವ ಪತಿ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡು ವಾಪಸ್ ಬರುವಂತೆ ಪತ್ನಿಗೆ ಮನವಿ ಮಾಡಿದ್ದಾನೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದ ನೀರಜ್ ವಿಶ್ವಕರ್ಮ ಎಂಬಾತ ಐದು ವರ್ಷಗಳ ಹಿಂದೆ ರೀಚಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಇವರಿಬ್ಬರೂ ಸುಖವಾಗಿ ಸಂಸಾರ ಸಾಗಿಸಿಕೊಂಡು ಹೋಗುತ್ತಿದ್ದ ಮಧ್ಯೆ ರೀಚಾಗೆ ಅಕೌಂಟೆಂಟ್ ಆಗಿ ಸರ್ಕಾರಿ ಉದ್ಯೋಗ ದೊರೆತಿದೆ.
ಇದಾದ ಬಳಿಕ ಜನವರಿ 18ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿದ್ದ ರೀಚಾ ವಾಪಸ್ ಬಂದಿರಲಿಲ್ಲ. ಪತ್ನಿಗೆ ಸರ್ಕಾರಿ ಉದ್ಯೋಗ ದೊರೆತಿರುವ ವಿಷಯವನ್ನು ಅರಿತ ಪತಿ ಅಪಾಯಿಂಟ್ಮೆಂಟ್ ಆರ್ಡರ್ ಪಡೆಯಲು ಕಚೇರಿಗೆ ಬರುವ ಸಮಯದಲ್ಲಿ ಅಲ್ಲಿಗೆ ಹೋಗಿದ್ದಾನೆ. ಆದರೆ ಆಕೆ ಅಪಾಯಿಂಟ್ಮೆಂಟ್ ಆರ್ಡರ್ ಪಡೆದು ಹಿಂದಿನ ಬಾಗಿಲಿನಿಂದ ಕಾಲ್ಕಿತ್ತಿದ್ದಾಳೆ.
ಆ ಬಳಿಕ ಪತ್ನಿಯನ್ನು ಮನೆಗೆ ವಾಪಸ್ ಕರೆ ತರಲು ನೀರಜ್ ಇನ್ನಿಲ್ಲದಂತೆ ಪ್ರಯತ್ನ ನಡೆಸಿದ್ದು, ಅದ್ಯಾವುದು ಫಲ ನೀಡಿಲ್ಲ. ಅಲ್ಲದೆ ಆಕೆ ಮತ್ತೊಂದು ಮದುವೆಯಾಗಿರುವ ವಿಷಯವು ಕೂಡ ಈತನಿಗೆ ತಿಳಿದು ಬಂದಿದೆ. ಹೀಗಾಗಿ ಈಗ ನ್ಯಾಯ ಕೋರಿ ಮಾಧ್ಯಮಗಳ ಮೊರೆ ಹೋಗಿದ್ದು ಮರಳಿ ಬರುವಂತೆ ಪತ್ನಿಗೆ ಮನವಿ ಮಾಡಿದ್ದಾನೆ.