ಮೀರತ್ನಲ್ಲಿ ನಡೆದ ಕುಖ್ಯಾತ ಡ್ರಮ್ ಕೊಲೆ ಮತ್ತು ಔರೈಯಾದಲ್ಲಿ ಪತಿಯನ್ನು ಕೊಲೆ ಮಾಡಲು ಗುತ್ತಿಗೆ ಕೊಟ್ಟ ಪ್ರಕರಣ ಸದ್ದು ಮಾಡಿದ ಬಳಿಕ ವ್ಯಕ್ತಿಯೊಬ್ಬ ಭಯಗೊಂಡಿದ್ದು ತನ್ನ ಪತ್ನಿಯನ್ನು ಅವಳ ಪ್ರಿಯತಮನ ಜೊತೆ ಮದುವೆ ಮಾಡಿಕೊಟ್ಟಿದ್ದಾನೆ. ತನ್ನ ಪತ್ನಿ ಮತ್ತು ಪ್ರಿಯಕರ ತನಗೆ ಏನಾದರೂ ಮಾಡಬಹುದು ಎನ್ನುವ ಭಯದಿಂದ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದು ಬಳಿಕ ಪ್ರಕರಣ ತಿರುವು ಪಡೆದುಕೊಂಡಿದೆ.
ತನ್ನ ಪತ್ನಿ ಮತ್ತು ಆತನ ಪ್ರಿಯಕರನ ಮದುವೆ ನೋಂದಣಿಗೆ ತಾನೇ ಸಾಕ್ಷಿಯಾಗಿದ್ದಾನೆ. ಆದರೆ ಮಹಿಳೆಯ ಹೊಸ ಅತ್ತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮೊದಲ ಪತಿಯೊಂದಿಗೆ ಇಬ್ಬರು ಮಕ್ಕಳು ಇದ್ದ ಕಾರಣ ಮಹಿಳೆಯನ್ನು ವಾಪಸ್ ಕಳಿಸಿದ್ದಾರೆ. ಹಳೆ ಪತಿಯ ಬಳಿಗೆ ವಾಪಸ್ ಹೊಸ ಅತ್ತೆ ವಾಪಸ್ ಕಳಿಸಿದ್ದರಿಂದ ಪತ್ನಿ ಮತ್ತೆ ತನ್ನ ಹಳೆ ಗಂಡನ ಬಳಿಗೆ ಬಂದಿದ್ದಾರೆ. ವಾಪಸ್ ಬಂದ ಪತ್ನಿಯನ್ನು ಸ್ವೀಕರಿಸಲು ಗಂಡ ಒಪ್ಪಿಕೊಂಡಿದ್ದು, ಆಕೆಗೆ ಏನಾದರೂ ಹಾನಿ ಆದರೆ ಅದಕ್ಕೆ ಪ್ರಿಯತಮನೆ ಕಾರಣ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರದ ಕತಾರ್ ಜೋಟ್ ಗ್ರಾಮದ ಬಬ್ಲು, 2017 ರಲ್ಲಿ ಗೋರಖ್ಪುರ ಜಿಲ್ಲೆಯ ರಾಧಿಕಾ ಎನ್ನುವವರನ್ನು ಮದುವೆಯಾದರು. ಬೇರೆ ರಾಜ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಬಬ್ಲುಗೆ ಗ್ರಾಮಸ್ಥರಿಂದ ಪತ್ನಿ ಒಂದೂವರೆ ವರ್ಷದಿಂದ ಅದೇ ಹಳ್ಳಿಯ ವಿಕಾಸ್ ಎನ್ನುವ ವ್ಯಕ್ತಿ ಜೊತೆ ಸಂಬಂಧ ಹೊಂದಿರುವುದು ತಿಳಿದುಬಂದಿದೆ. ಬಳಿಕ ಬಬ್ಲು ಕತಾರ್ ಜೋಟ್ಗೆ ಹೋಗಿ ಸತ್ಯವನ್ನು ತಿಳಿಯಲು ನಿರ್ಧರಿಸಿದ್ದರು. ಕೆಲವು ದಿನಗಳ ಪತ್ನಿಯ ಮೇಲೆ ಕಣ್ಣಿಟ್ಟ ಬಳಿಕ ಗ್ರಾಮಸ್ಥರು ಹೇಳಿದ್ದು ನಿಜ ಎಂದು ತಿಳಿದುಕೊಂಡಿದ್ದಾರೆ. ಅವರ ಪತ್ನಿ ರಾಧಿಕಾ ಮತ್ತು ಆಕೆಯ ಪ್ರಿಯತಮ ವಿಕಾಸ್ ರಹಸ್ಯವಾಗಿ ಭೇಟಿ ಮಾಡುತ್ತಿದ್ದರು.
ರಾಧಿಕಾ ಜೊತೆ ಈ ಬಗ್ಗೆ ಜಗಳವಾಡಿದರೂ ಮೋಸ ಮಾಡುವುದನ್ನು ತಪ್ಪಿಸಲು ಆಗಲ್ಲ ಎಂದು ತೀರ್ಮಾನಿಸಿದ ಬಬ್ಲು ಪತ್ನಿಯನ್ನು ಆಕೆಯ ಪ್ರಿಯತಮನ ಜೊತೆ ಮದುವೆ ಮಾಡಿಕೊಡಲು ನಿರ್ಧರಿಸಿದರು. ಮಕ್ಕಳನ್ನು ತಾನೇ ನೋಡಿಕೊಳ್ಳಲು ಬಬ್ಲು ನಿರ್ಧರಿಸಿದ್ದು ಪತ್ನಿಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದರು. ಕಳೆದ ತಿಂಗಳು ಈ ಬಗ್ಗೆ ಗ್ರಾಮದ ಹಿರಿಯರಿಗೆ ಮಾಹಿತಿ ನೀಡಿದರು. ರಾಧಿಕಾ ಮತ್ತು ವಿಕಾಸ್ ಶಿವ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು.
ಮದುವೆಯ ಬಳಿಕ ಬಬ್ಲು ದಂಪತಿಗಳೊಂದಿಗೆ ಫೋಟೋಗೆ ಕೂಡ ತೆಗೆಸಿಕೊಂಡಿದ್ದಾರೆ. ಮದುವೆಯನ್ನು ನೋಂದಣಿ ಕೂಡ ಮಾಡಿಸಿದ್ದು ಅದಕ್ಕೆ ತಾನೇ ಸಾಕ್ಷಿದಾರನಾಗಿ ಸಹಿ ಹಾಕಿದ್ದಾರೆ. ಭಯದಿಂದ ಮದುವೆ ಮಾಡಿಸಿದೆ.. ಪತ್ನಿಗೆ ಯಾಕೆ ಬೇರೆ ಮದುವೆ ಮಾಡಿಸಿದಿರಿ ಎಂದು ಕೇಳಿದ್ದಕ್ಕೆ, ನನಗೆ ಇವರಿಬ್ಬರೂ ಏನಾದರೂ ಮಾಡಬಹುದು ಎನ್ನುವ ಭಯದಿಂದ ಮದುವೆ ಮಾಡಿಸಿದೆ. ಇತ್ತೀಚಿನ ದಿನಗಳಲ್ಲಿ ಹೆಂಡತಿಯರು ಪ್ರಿಯಕರನ ಜೊತೆ ಸೇರಿ ಗಂಡಂದಿರನ್ನು ಕೊಲೆ ಮಾಡುವುದನ್ನು ನೋಡಿದ್ದೇನೆ.
ಮೀರತ್ನಲ್ಲಿ ಏನಾಯಿತು ಎಂಬುದನ್ನು ನೋಡಿದ ನಂತರ, ನಾವಿಬ್ಬರೂ ಶಾಂತಿಯುತವಾಗಿ ಬದುಕಲು ನನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ. ಗೋರಖ್ಪುರದಲ್ಲಿರುವ ವಿಕಾಸ್ ಅವರ ಮನೆಗೆ ಹೋದ ಕೆಲವೇ ದಿನಗಳ ನಂತರ, ರಾಧಿಕಾ ಅವರನ್ನು ಅವರ ಅತ್ತೆ ವಾಪಸ್ ಹೋಗುವಂತೆ ಕೇಳಿದ್ದಾರೆ. ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಬಂದಿದ್ದು, ಆ ಮಕ್ಕಳು ತಾಯಿ ಇಲ್ಲದೆ ಬೆಳೆಯುವುದು ಇಷ್ಟವಾಗಲಿಲ್ಲ ಅದಕ್ಕೆ ವಾಪಸ್ ಕಳಿಸಿದ್ದಾಗಿ ವಿಕಾಸ್ ತಾಯಿ ಹೇಳಿದ್ದಾರೆ. ಬಳಿಕ ರಾಧಿಕಾ ವಾಪಸ್ ಬಬ್ಲು ಜೊತೆ ಜೀವನ ಸಾಗಿಸಲು ಒಪ್ಪಿಕೊಂಡಿದ್ದು, ಬಬ್ಲು ಕೂಡ ಇದಕ್ಕೆ ಒಪ್ಪಿದ್ದಾರೆ.