ಲಖನೌ : ಪ್ರಾಣಿಗಳ ಮೇಲಿನ ಪ್ರೀತಿಯ ಆಘಾತಕಾರಿ ಪ್ರಕರಣವೊಂದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸಾಕು ಬೆಕ್ಕು ಸಾವನ್ನಪ್ಪಿದ ಬಳಿಕ ಅದನ್ನು ಮತ್ತೆ ಜೀವಂತಗೊಳಿಸುವ ಭರವಸೆಯಲ್ಲಿ ಮಹಿಳೆಯೊಬ್ಬಳು ಅದರ ಮೃತದೇಹವನ್ನು ಎರಡುದಿನಗಳವರೆಗೆ ತನ್ನ ಎದೆಯ ಬಳಿ ಇಟ್ಟುಕೊಂಡಿದ್ದಳು. ಬೆಕ್ಕು ಬದುಕುಳಿಯದಿದ್ದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಹಿಳೆಯನ್ನು ಪೂಜಾ (32) ಎಂದು ಗುರುತಿಸಲಾಗಿದೆ. ಈಕೆ ಸುಮಾರು 8 ವರ್ಷಗಳ ಹಿಂದೆ ದೆಹಲಿ ನಿವಾಸಿ ಯುವಕನನ್ನು ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದಳು. ಇದಾದ ನಂತರ ಪೂಜಾ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದಳು. ಈ ವೇಳೆ ಒಂಟಿತನವನ್ನು ಹೋಗಲಾಡಿಸಲು ಪೂಜಾ ಒಂದು ಸಾಕು ಬೆಕ್ಕನ್ನು ಸಾಕಿದ್ದಳು.
ಆದರೆ ಬೆಕ್ಕು ಗುರುವಾರ ಸತ್ತುಹೋಗಿದೆ. ತಾಯಿ ಗಜ್ರಾ ದೇವಿ ಬೆಕ್ಕಿನ ದೇಹವನ್ನು ಹೂಳಲು ಹೋದಾಗ ಪೂಜಾ ನಿರಾಕರಿಸಿದರು. ತನ್ನ ಪ್ರೀತಿಯ ಬೆಕ್ಕು ಜೀವಂತವಾಗುತ್ತದೆ ಎಂದು ಹೇಳಿದ್ದಾಳೆ.
ತಾಯಿ ಗಜ್ರಾ ದೇವಿ ಪ್ರತಿಕ್ರಿಯಿಸಿ, ಎರಡು ದಿನಗಳಿಂದ ಬೆಕ್ಕಿನ ಮೃತ ದೇಹವನ್ನು ಎದೆಯ ಬಳಿ ಇಟ್ಟುಕೊಂಡಿದ್ದಳು. ಶನಿವಾರ ಮಧ್ಯಾಹ್ನ ತನ್ನ ಭರವಸೆಗಳು ಹುಸಿಯಾದಾಗ, ಪೂಜಾ ಮೂರನೇ ಮಹಡಿಯಲ್ಲಿರುವ ತನ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಳು. ಇತ್ತ ಮಗಳು ಬಾರದಿದ್ದರಿಂದ ಕೋಣೆಗೆ ಹೋಗಿ ನೋಡಿದಾಗ ನೇತಾಡುತ್ತಿರುವ ಆಕೆಯ ದೇಹವನ್ನು ನೋಡಿ ಕಿರುಚಿದೆ ಎಂದರು.
ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಾಣಿ ಪ್ರೀತಿಯ ವಿಷಯವು ಇದೀಗ ಚರ್ಚೆಗೆ ಗ್ರಾಸವಾಗಿದೆ.