ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಗುರುವಾರ ಭಯಾನಕ ದುರಂತ ನಡೆದಿದೆ.
ಕಬ್ಬು ಕಟಾವು ಮಾಡುತ್ತಿದ್ದ ಬೃಹತ್ ಹಾರ್ವೆಸ್ಟರ್ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲೇ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. 54 ವರ್ಷದ ಶೋಭಾ ಶ್ರೀಕಾಂತ ಸಂಕ್ರಟ್ಟಿ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮದೇ ಜಮೀನಿನಲ್ಲಿ ಯಂತ್ರದಿಂದ ಕಬ್ಬು ಕಟಾವು ನಡೆಯುತ್ತಿತ್ತು. ಶೋಭಾ ಯಂತ್ರದ ಹಿಂದೆ ಬೀಳುತ್ತಿದ್ದ ಕಬ್ಬುಗಳನ್ನು ಆರಿಸಿ ಸರಿದೂಗಿಸುವ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಯಂತ್ರದ ತಿರುಗುವ ಬ್ಲೇಡ್‌ಗೆ ಸಿಲುಕಿಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ಭಯಾನಕ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಘಟನೆ ನಡೆದ ತಕ್ಷಣ ಸ್ಥಳೀಯರು ಯಂತ್ರದ ಆಪರೇಟರ್ ಅನ್ನು ನಿಲ್ಲಿಸಲೂ ಪ್ರಯತ್ನಿಸಿದರೂ ಈಗಾಗಲೇ ಶೋಭಾ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದರು.
ತಕ್ಷಣ ಅಥಣಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಾನಂದ ಭೋಜೆ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅಥಣಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.




