ಬೆಂಗಳೂರು: ಮೇ 31, 2025 ರಂದು ಬೆಂಗಳೂರಿನ ಬೆಳ್ಳಂದೂರು ಪ್ರದೇಶದಲ್ಲಿ ಉತ್ತರ ಭಾರತ ಮೂಲದ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿತ್ತು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈಗ, ಆ ಮಹಿಳೆ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿರುವ ವಿಡಿಯೊ ಕೂಡ ವೈರಲ್ ಆಗಿದೆ.ಘಟನೆಯ ಸಂದರ್ಭದಲ್ಲಿ, ಮಹಿಳೆಯು ಆಟೋ ತನ್ನ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿದ್ದರು.
ಆದರೆ, ಆಟೋ ಚಾಲಕನು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನ್ನ ಮೇಲೆ ಯಾವುದೇ ತಪ್ಪಿಲ್ಲ ಎಂದು ವಾದಿಸಿದ್ದರು. ಈ ವಿಷಯದಿಂದ ಉಂಟಾದ ವಾಗ್ವಾದ ತೀವ್ರಗೊಂಡು, ಇಬ್ಬರ ನಡುವೆ ಕಿತ್ತಾಟಕ್ಕೆ ಕಾರಣವಾಯಿತು.
ಈ ಸಂದರ್ಭದಲ್ಲಿ ಆಟೋ ಚಾಲಕನು ವಿಡಿಯೊ ರೆಕಾರ್ಡ್ ಮಾಡಲು ಮುಂದಾದಾಗ, ಕುಪಿತಗೊಂಡ ಮಹಿಳೆ ಚಪ್ಪಲಿಯಿಂದ ಚಾಲಕನಿಗೆ ಸತತವಾಗಿ ಹೊಡೆದಿದ್ದರು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ, ಕನ್ನಡಪರ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು.
ಕೆಲವರು ಉತ್ತರ ಭಾರತೀಯರ ದರ್ಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ, ಆ ಮಹಿಳೆ ಕನ್ನಡಪರ ಸಂಘಟನೆಗಳ ಸಮ್ಮುಖದಲ್ಲಿ ಆಟೋ ಚಾಲಕನ ಕಾಲಿಗೆ ನಮಸ್ಕರಿಸಿ, ತಾನು ಮಾಡಿದ್ದು ತಪ್ಪು ಎಂದು ಕ್ಷಮೆಯಾಚಿಸಿದ್ದಾರೆ.




