ಬೆಳಗಾವಿ: ಅಥಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿಯಲ್ಲಿ 11 ತಿಂಗಳ ಹಿಂದೆ ವ್ಯಕ್ತಿಯೊಬ್ಬರನ್ನು ಮುಳುಗಿಸಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಹಾರೂಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ, ಅವಳ ಪ್ರಿಯಕರ ಸೇರಿ ಮೂವರನ್ನು ಹಾರೂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘2023ರ ಡಿಸೆಂಬರ್ 27ರಂದು ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿತ್ತು. ಈ ಮಧ್ಯೆ ರಾಯಬಾಗ ತಾಲ್ಲೂಕಿನ ಇಟನಾಳದಲ್ಲಿ ಯುವಕನೊಬ್ಬ ಕಾಣೆಯಾಗಿರುವ ವಿಷಯ ತಿಳಿಯಿತು. ಆದರೆ, ಕಾಣೆಯಾಗಿರುವ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ’ ಎಂದು ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ಶವ ಪತ್ತೆ ಜಾಡು ಹಿಡಿದು, ತನಿಖೆ ಕೈಗೊಂಡಾಗ ಕೃಷ್ಣಾ ನದಿಯಲ್ಲಿ ಮೃತಪಟ್ಟಿದ್ದು ಮಲ್ಲಪ್ಪ ಕಂಬಾರ ಎಂದು ಗೊತ್ತಾಯಿತು. ಮಲ್ಲಪ್ಪ ಅವರ ಪತ್ನಿ ದಾನವ್ಯ, ಅವಳ ಪ್ರಿಯಕರ ಪ್ರಕಾಶ ಬೆನ್ನಾಳಿ, ರಾಮಪ್ಪ ಮಾದರ ಕೃಷ್ಣಾ ನದಿಯಲ್ಲಿ ಮಲ್ಲಪ್ಪನನ್ನು ಮುಳುಗಿಸಿ ಕೊಲೆ ಮಾಡಿದ್ದಾರೆ’ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಅವರು ತಿಳಿಸಿದರು.
ಒಂದೂವರೆ ವರ್ಷದ ಹಿಂದೆ ದಾನವ್ಯ ಕಾಣೆಯಾದ ಕುರಿತು ಅವರ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಾನವ್ಯ ಪ್ರಕಾಶ ಬೆನ್ನಾಳಿ ಜತೆ ಓಡಿಹೋಗಿದ್ದು, ಪತಿ ಮಲ್ಲಪ್ಪ ಅವರಿಗೆ ತಿಳಿಯಿತು.
ಕೆಲ ದಿನಗಳ ನಂತರ ದಾನವ್ಯ ಮನೆಗೆ ವಾಪಸ್ ಆಗಿದ್ದರು. ಓಡಿ ಹೋಗಿದ್ದ ವಿಚಾರಕ್ಕೆ ಮನೆಯಲ್ಲಿ ದಂಪತಿ ಮಧ್ಯೆ ಪ್ರತಿದಿನವೂ ಗಲಾಟೆಯಾಗುತ್ತಿತ್ತು. ಪತ್ನಿಯ ಸಹವಾಸ ಬಿಡುವಂತೆ ಪಕಾಶನಿಗೆ ಮಲ್ಲಪ್ಪ ಎಚ್ಚರಿಕೆ ಕೊಟ್ಟಿದ್ದರು. ಹಾಗಾಗಿ ದಾನವ್ಯ ಮತ್ತು ಪ್ರಕಾಶನು ರಾಮಪ್ಪ ಎಂಬುವನ ನೆರವಿನಿಂದ ಕಳೆದ ಡಿಸೆಂಬರ್‌ನಲ್ಲಿ
ಮಲ್ಲಪ್ಪನನ್ನು ಕೊಲೆ ಮಾಡಿದ್ದಾರೆ’ ಎಂದು ವಿವರಿಸಿದರು