ಬೆಂಗಳೂರು: ಪ್ರೀತಿ-ಪ್ರೇಮವೆಂದು ಮದುವೆ ನಾಟಕವಾಡಿ ಮೂರು ಮದುವೆಯಾಗಿ ಮೂವರು ಗಂಡಂದಿರಿಗೂ ಮಹಿಳೆಯೊಬ್ಬಳು ಕೈಕೊಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಅಣಬೆ ಗ್ರಾಮದ ಸುಧಾರಾಣಿ ಎಂಬುವವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.ಮೊದಲ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಮೊದಲ ಪತಿಯನ್ನು ಬಿಟ್ಟು ಮತ್ತೊಂದು ಮದುವೆಯಾಗಿದ್ದಾಳೆ.
ಬಳಿಕ ಆತನನ್ನೂ ಬಿಟ್ಟು ಮೂರನೇ ಮದುವೆಯಾಗಿದ್ದು, ಈಗ ಆತನಿಗೂ ಕೈಕೊಟ್ಟು ಎಸ್ಕೇಪ್ ಆಗಿದ್ದಾಳೆ. ಮದುವೆ ಹೆಸರಲ್ಲಿ ಹಣ ದೋಚುದುದನ್ನೇ ಮಹಿಳೆ ಕಾಯಕವನ್ನಾಗಿ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಸುಧಾರಾಣಿಯ ಮೊದಲ ಪತಿ ಹಾಗೂ ಎರಡನೇ ಪತಿ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೇ ಘಟನೆ ಬೆಳಕಿಗೆ ಬಂದಿದೆ.
ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಗೆ ಕಾರು ಓಡಿಸಲು ಬರಲ್ಲ, ಬುಲೆಟ್ ಓಡಿಸಲು ಬರಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ, ಮಕ್ಕಳ ಭವಿಷವನ್ನೂ ವಿಚಾರಿಸದೇ ಪತಿ ವೀರೇಗೌಡನನ್ನು ಬಿಟ್ಟು ಹೋಗಿದ್ದಳು.
ಮೊದಲ ಪತಿಯಿಂದ ದೂರಾದ ಸುಧಾರಾಣಿ, ನಂತರ ಡೆಲಿವರಿ ಬಾಯ್ ಆಗಿದ್ದ ಅನಂತಮೂರ್ತಿ ಎಂಬಾತನ ಪರಿಚಯವಾಗಿದ್ದು, ಆತನ ಬಳಿ ತನಗೆ ಗಂಡ ಇಲ್ಲ, ಸಾವನ್ನಪ್ಪಿದ್ದಾನೆ ಸುಳ್ಳು ಹೇಳಿ ನಂಬಿಸಿ, ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಳು. ಸುಮಾರು ಒಂದೂಕಾಲು ವರ್ಷಗಳ ಕಾಲ ಅನಂತಮೂರ್ತಿ ಜೊತೆ ಸಂಸಾರ ಮಾಡಿದ್ದಳು. ಈ ವೇಳೆ ವಿವಿಧ ಕಾರಣಗಳನ್ನು ನೀಡಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾಳಂತೆ.
ಬಳಿಕ ಅನಂತಮೂರ್ತಿಯಿಂದಲೂ ದೂರಾದ ಸುಧಾರಾಣಿ, ಕನಕಪುರ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಇಬ್ಬರೂ ಸುಧಾರಾಣಿಯ ಮೋಸದಾಟಕ್ಕೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸುಧಾರಾಣಿ ವಿರುದ್ಧ ದೂರು ದಾಖಲಿಸಿದ್ದಾರೆ.




