ರಾಮನಗರ: ಅಕ್ರಮ ಸಂಬಂಧಕ್ಕೆ ಪುಟ್ಟಮಕ್ಕಳು ಅಡ್ಡಿಯಾದರೆಂದು ಪ್ರಿಯಕರನ ಜೊತೆ ಸೇರಿ ತಾಯಿಯೇ ಹೆತ್ತ ಮಕ್ಕಳಿಬ್ಬರನ್ನು ಹತ್ಯೆಗೈದಿರುವ ಅಮಾನುಷ ಘಟನೆ ರಾಮನಗರದ ಕೆಂಪೇಗೌಡ ಸರ್ಕಲ್ ಬಳಿ ನಡೆದಿದೆ.
ಸ್ವೀಟಿ ಹಾಗೂ ಆಕೆಯ ಪ್ರಿಯಕರ ಗ್ರಗೋರಿ ಫ್ರಾನ್ಸಿಸ್ ನನ್ನು ಪೊಲೀಸರು ಬಂಧಿಸಿದ್ದಾರೆ.ಸ್ವೀಟಿ (21) ತನ್ನ ಮಕ್ಕಳಾದ ಮೂರು ವರ್ಷದ ಕಬಿಲ್ ಹಾಗೂ 11 ತಿಂಗಳ ಕಬೀಲನ್ ನನ್ನು ಹತ್ಯೆಗೈದು ಸ್ಮಶಾನದಲ್ಲಿ ಹೂತು ಹಾಕಿದ್ದಾಳೆ.
ಸ್ವೀಟಿಗೆ ಈ ಹಿಂದೆಯೇ ಶಿವು ಎಂಬುವವರ ಜೊತೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು. ಆದರೆ ಸ್ವೀಟಿ, ಪತಿ ಶಿವುನನ್ನು ಬಿಟ್ಟು ಗ್ರಗೋರಿ ಫ್ರಾನ್ಸಿಸ್ ಜೊತೆ ರಾಮನಗರದಲ್ಲಿ ನೆಲೆಸಿದ್ದಳು. ಆಕೆಯೊಂದಿಗೆ ಇಬ್ಬರು ಮಕ್ಕಳು ಇದ್ದರು.
ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗಿದ್ದಾರೆಂದು ಇದೀಗ ಮಗು ಕಬೀಲನ್ ನನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ಬಳಿಕ ಮಗುವಿನ ಶವವನ್ನು ಫ್ರಾನ್ಸಿಸ್ ಹಾಗೂ ಸ್ವೀಟಿ ಸ್ಮಶಾನಕ್ಕೆ ಕರೆತಂದಿದ್ದಾರೆ. ಈ ವೇಳೆ ಸ್ಮಶಾನದ ಸಿಬ್ಬಂದಿ ಮಗುವಿನ ಮೇಲೆ ಇದ್ದ ಗಾಯದ ಗುರುತು ಕಂಡಿದ್ದಾರೆ. ಇದನ್ನು ಗಮನಿಸಿ ಮಗುವಿಗೆ ಏನಾಗಿತ್ತು? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಸ್ವೀಟಿ ಮಗು ಖಾಯಿಲೆಯಿಂದ ಸಾವನ್ನಪ್ಪಿದೆ ಎಂದಿದ್ದಾಳೆ. ಅನುಮಾನಗೊಂಡ ಸ್ಮಶಾನ ಸಿಬ್ಬಂದಿ ಮಗು ದೇಹದ ಮೇಲಿದ್ದ ಗಾಯ ಹಾಗೂ ಸ್ವೀಟಿ ಹಾಗೂ ಫ್ರಾನ್ಸಿಸ್ ನ ಫೋಟೊ ತೆಗೆದುಕೊಂಡಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಐಜೂರು ಪೊಲೀಸರು ಸ್ವೀಟಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮಗು ಕೊಲೆ ರಹಸ್ಯವನ್ನು ಬಾಯ್ಬಿಟ್ಟಿದ್ದಾಳೆ. ಈ ಹಿಂದೆ ಇನ್ನೋರ್ವ ಮಗನನ್ನು ಇದೇ ಕಾರಣಕ್ಕೆ ಹತ್ಯೆ ಮಾಡಿದ್ದಳು ಎಂದು ತಿಳಿದುಬಂದಿದೆ.