ಪಾಟ್ನಾ: ಸುಳ್ಳು ಹೇಳಿ ಸಿಕ್ಕಿಬೀಳುವ ಭಯದಿಂದ ಬಿಹಾರದ (Bihar) ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಬಿಹಾರದ ಶೇಖ್ಪುರದಲ್ಲಿ (Sheikhpura) ನಡೆದಿದೆ.
ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಯಲ್ಲಿ ನಾನು 440ನೇ ರ್ಯಾಂಕ್ ಪಡೆದಿದ್ದೇನೆ ಎಂದು ಸುಳ್ಳು ಹೇಳಿ ಇಡೀ ಗ್ರಾಮವನ್ನೇ ನಂಬಿಸಿದ್ದ ರಂಜಿತ್ ಕುಮಾರ್ ಎಂಬಾತ ಈಗ ನಾಪತ್ತೆಯಾಗಿದ್ದಾನೆ.
ಏನಿದು ಘಟನೆ?
ಬಿಹಾರದ ಶೇಖ್ಪುರ ಜಿಲ್ಲೆಯ ಫತೇಪುರ್ ಗ್ರಾಮದ ನಿವಾಸಿ ರಂಜಿತ್ ಕುಮಾರ್, ಇತ್ತೀಚೆಗೆ ಪ್ರಕಟವಾದ ಯುಪಿಎಸ್ಸಿ ಫಲಿತಾಂಶದಲ್ಲಿ ತಾನು 440ನೇ ರ್ಯಾಂಕ್ ಗಳಿಸಿರುವುದಾಗಿ ಘೋಷಿಸಿಕೊಂಡಿದ್ದನು.
ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ಆತನನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿ, ಹೂಮಾಲೆ ಹಾಕಿ ಸನ್ಮಾನಿಸಿದ್ದರು.
ಸ್ಥಳೀಯ ರಾಜಕಾರಣಿಗಳು ಮತ್ತು ಪೊಲೀಸರು ಕೂಡ ಈತನ ಸಾಧನೆಯನ್ನು ಮೆಚ್ಚಿ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ವೇದಿಕೆಗಳ ಮೇಲೆ ನಿಂತು ರಂಜಿತ್ ಕುಮಾರ್, ವಿದ್ಯಾರ್ಥಿಗಳಿಗೆ “ಕಷ್ಟಪಟ್ಟು ಓದಿದರೆ ಸಾಧನೆ ಸಾಧ್ಯ” ಎಂದು ಸ್ಫೂರ್ತಿದಾಯಕ ಭಾಷಣಗಳನ್ನೂ ಮಾಡಿದ್ದನು. ಮಾಜಿ ಶಾಸಕರೊಬ್ಬರು ಆತನ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ್ದರು.
ಬಯಲಾಯ್ತು ಅಸಲಿ ಬಣ್ಣ!
ಆದರೆ, ಈತನ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಯುಪಿಎಸ್ಸಿ ಅಧಿಕೃತ ವೆಬ್ಸೈಟ್ನಲ್ಲಿ ರ್ಯಾಂಕ್ ಪಟ್ಟಿಯನ್ನು ಪರಿಶೀಲಿಸಿದಾಗ ಸತ್ಯ ಹೊರಬಂದಿದೆ. 440ನೇ ರ್ಯಾಂಕ್ ಪಡೆದವರು ಕರ್ನಾಟಕದ ರಂಜಿತ್ ಕುಮಾರ್ ಆರ್. ಎಂಬ ಅಭ್ಯರ್ಥಿಯಾಗಿದ್ದರು. ಬಿಹಾರದ ಈ ರಂಜಿತ್ ಕುಮಾರ್ಗೂ ಆ ರ್ಯಾಂಕ್ಗೂ ಯಾವುದೇ ಸಂಬಂಧವಿರಲಿಲ್ಲ. ಹೆಸರಿನ ಸಾಮ್ಯತೆಯನ್ನು ಬಳಸಿಕೊಂಡು ಇಡೀ ಸಮಾಜವನ್ನು ಈತ ದಿಕ್ಕು ತಪ್ಪಿಸಿದ್ದ.
ಯಾವಾಗ ಈ ವಿಷಯ ಗ್ರಾಮಸ್ಥರಿಗೆ ಮತ್ತು ಪೊಲೀಸರಿಗೆ ತಿಳಿಯಿತೋ, ಆ ಕೂಡಲೇ ರಂಜಿತ್ ಕುಮಾರ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಗ್ರಾಮದಿಂದ ಪರಾರಿಯಾಗಿದ್ದಾನೆ. ಸದ್ಯ ಈತ ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ. ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕೇವಲ ಪ್ರಚಾರಕ್ಕಾಗಿ ಮತ್ತು ಸನ್ಮಾನ ಪಡೆಯುವ ಹಪಾಹಪಿಯಿಂದ ಇಂತಹ ಸುಳ್ಳು ಹೇಳಿ ಈಗ ಇಡೀ ಕುಟುಂಬವೇ ಮುಜುಗರಕ್ಕೀಡಾಗುವಂತೆ ಮಾಡಿದ್ದಾನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಬಿಹಾರದ ತುಷಾರ್ ಕುಮಾರ್ ಎಂಬ ಯುವಕ ಇದೇ ರೀತಿ 44ನೇ ರ್ಯಾಂಕ್ ವಿಷಯದಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.




