ಮೊಳಕಾಲ್ಮುರು: ವಸತಿ ಶಾಲೆಯೊಂದರಲ್ಲಿನ ಬಾಲಕಿಯನ್ನು ತಾನವಳ ಚಿಕ್ಕಪ್ಪ ಎಂದು ಕಥೆ ಕಟ್ಟಿ ಹಾಸ್ಟೆಲ್‌ನಿಂದ ಹೊರ ಕರೆದುಕೊಂಡು ಹೋಗಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ವಿವಾಹ ಮಾಡಿಕೊಂಡಿದ್ದ ಅನ್ಯ ಧರ್ಮಿಯ ಯುವಕ ಜೈಲು ಪಾಲಾಗಿದ್ದಾನೆ.
ಬಾಲಕಿ ಜತೆ ಹೈದರಾಬಾದ್‌ನ ರೂಂನಲ್ಲಿದ್ದ ಯುವಕನನ್ನು ಪೊಲೀಸರು ಶನಿವಾರ ಠಾಣೆಗೆ ಕರೆತಂದರು. ಬಾಲಕಿಗೆ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಪ್ರೀತಿ, ಪ್ರೇಮವೆಂದು ಬಾಲಕಿಯನ್ನು ಮರುಳು ಮಾಡಿದ್ದ ಆರೋಪಿ, ಜು.೨ರಂದು ಹಾಸ್ಟೆಲ್‌ನಿಂದ ಕರೆದೊಯ್ದಿದ್ದ. ಬಾಲಕಿಯ ತಂದೆಯ ಆರೋಗ್ಯ ಹದಗೆಟ್ಟು ಗಂಭೀರ ಸ್ಥಿತಿಗೆ ತಲುಪಿದಾಗ ಈಕೆಯ ಸೋದರ ಮಾವ ಬಾಲಕಿಯನ್ನು ಹಾಸ್ಟೆಲ್‌ನಿಂದ ಕರೆತರಲು ಹೋಗಿದ್ದರು. ಆಗ ಬಾಲಕಿ ಯುವಕನೊಂದಿಗೆ ತೆರಳಿದ ವಿಷಯ ಬಯಲಾಯಿತು. ಮಾರನೇ ದಿನವೇ ಈಕೆಯ ತಂದೆ ಕೊನೆ ಉಸಿರೆಳೆದಿದ್ದಾರೆ. ತಂದೆಯ ಸಾವಿನ ವಿಷಯ ತಿಳಿದಿದ್ದರೂ ಬಾಲಕಿ ಅಂತಿಮ ದರ್ಶನಕ್ಕೂ ಬರಲಿಲ್ಲ. ಅಂತ್ಯಕ್ರಿಯೆ ಪೂರೈಸಿದ ನಂತರ ಕುಟುಂಬ, ಬಾಲಕಿ ಕಾಣೆಯಾಗಿದ್ದಾಳೆ ಎಂದು ಜು.16ರಂದು ಮೊಳಕಾಲ್ಮುರು ಠಾಣೆಯಲ್ಲಿದೂರು ದಾಖಲಿಸಿತು. ಪ್ರಕರಣ ದಾಖಲಿಸಿಕೊಂಡಿದ್ದ ಮೊಳಕಾಲ್ಮೂರು ಪಟ್ಟಣದ ಪೊಲೀಸರು ಆರೋಪಿಯನ್ನು ಹುಡುಕಿ ಕೊನೆಗೂ ವಶಕ್ಕೆ ತೆಗೆದುಕೊಂಡಿದ್ದು ಭಾನುವಾರದಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.




