ಮಥುರಾ (ಉತ್ತರ ಪ್ರದೇಶ): ಅಪೆಂಡಿಕ್ಸ್ನಿಂದ ಬಳಲುತ್ತಿದ್ದ ಯುವಕನೊಬ್ಬ ಯುಟ್ಯೂಬ್ ವಿಡಿಯೋ ನೋಡಿ ಹೊಟ್ಟೆಯನ್ನು ಕೊಯ್ದುಕೊಂಡು ಸ್ವತಃ ತಾನೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಹೋಗಿ ಫಜೀತಿಗೆ ಸಿಲುಕಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ವೃಂದಾವಣದ 32 ವರ್ಷದ ರಾಜಾ ಬಾಬು ಎಂಬಾತ ಸ್ವತಃ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಹೋಗಿ ಈಗ ಆಸ್ಪತ್ರೆಗೆ ಸೇರಿದ್ದಾರೆ.
ರಾಜಾ ಬಾಬುಗೆ ಅವರ 14ನೇ ವಯಸ್ಸಿನಲ್ಲೇ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಆಗಿತ್ತು. ಆದರೂ ಪೂರ್ಣವಾಗಿ ಗುಣುಮುಖರಾಗಿರಲಿಲ್ಲ. ಈಗಲೂ ಕೂಡ ರಾಜಾ ಬಾಬು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವು ಬಾರಿ ವೈದ್ಯರನ್ನು ಸಂಪರ್ಕಿಸಿದರೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಇದರಿಂದಾಗಿ ತಾವೇ ಸ್ವತಃ ಆಪರೇಷನ್ ಮಾಡಿಕೊಳ್ಳಲು ಮುಂದಾಗಿದ್ದರು.
ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ಮಥುರಾಗೆ ಹೋಗಿ ಶಸ್ತ್ರಚಿಕಿತ್ಸಾ ಬ್ಲೇಡ್‌ಗಳು, ಹೊಲಿಗೆ ಉಪಕರಣಗಳು ಮತ್ತು ಅನಸ್ತೇಸಿಯಾ ಇಂಜೆಕ್ಷನ್‌ಗಳನ್ನು ತಂದಿದ್ದೆ. ಬುಧವಾರ ಬೆಳಗ್ಗೆ ತಮ್ಮ ಮನೆಯ ಕೋಣೆಯೊಂದರಲ್ಲಿ ಕುಳಿತು ಹೊಟ್ಟೆ ನೋವಿನ ಸ್ಥಳದಲ್ಲಿ ಏಳು ಸೆಂಟಿಮೀಟರ್ನಷ್ಟು ಹೊಟ್ಟೆಯನ್ನು ಕೊರೆದುಕೊಂಡೆ. ನಂತರ, ಒಳಗಡೆ ಏನಾಗಿದೆ ಎಂದು ಹೊಟ್ಟೆಯೊಳಗೆ ಕೈ ಹಾಕಲು ಯತ್ನಿಸಿದೆ. ಆಗ ಏನೂ ಗೊತ್ತಾಗದಿದ್ದಾಗ ಸೂಜಿ ಮತ್ತು ದಾರದಿಂದ ತನ್ನ ಹೊಟ್ಟೆಯನ್ನು ತಾವೇ ಹೊಲಿದುಕೊಂಡೆ. ಸ್ವಲ್ಪ ಸಮಯದ ನಂತರ, ಇಂಜೆಕ್ಷನ್‌ನ ಪರಿಣಾಮ ಕಡಿಮೆಯಾಗಿ ನೋವು ಹೆಚ್ಚಾಗಲು ಪ್ರಾರಂಭಿಸಿದ್ದರಿಂದ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದೆ. ಬಳಿಕ ಅವರು ನನ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ರಾಜಾ ಬಾಬು ಘಟನೆ ಕುರಿತು ವಿವರಿಸಿದ್ದಾರೆ.
ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ರಾಜಾ ಬಾಬು ಆಪರೇಷನ್ ಮಾಡಿಕೊಳ್ಳಲು ಮುಂದಾಗಿದ್ದ. ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕಾದ ಜಾಗದಲ್ಲಿ ಅನಸ್ತೇಸಿಯಾ ಇಂಜೆಕ್ಷನ್ ಚುಚ್ಚಿಕೊಂಡಿದ್ದ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಆಪರೇಷನ್ ಬ್ಲೇಡ್ ಮತ್ತು ಉಪಕರಣಗಳನ್ನು ಈ ವ್ಯಕ್ತಿ ಬಳಸಿ ಹೊಟ್ಟೆ ಕೊಯ್ದುಕೊಂಡಿದ್ದಾನೆ. ಬಳಿಕ ಸೂಜಿ ಮತ್ತು ದಾರದಿಂದ 11 ಹೊಲಿಗೆ ಹಾಕಿಕೊಂಡಿದ್ದಾನೆ ಎಂದು ವೃಂದಾವನ ಜಿಲ್ಲಾಸ್ಪತ್ರೆಯ ಹಿರಿಯ ಸರ್ಜನ್ ಡಾ.ಶಶಿ ರಂಜನ್ ತಿಳಿಸಿದ್ದಾರೆ.