ವಿಜಯನಗರ: ಇನ್ ಸ್ಟಾಗ್ರಾಂನಲ್ಲಿ ಆ ಯುವಕ, ವಿವಾಹಿತ ಯುವತಿಗೆ ಪರಿಚಯವಾಗಿದ್ದ. ಮೊದಲು ಆತನೇ ಮೆಸೇಜ್ ಮಾಡಿ ಆಕೆಯ ಹಿಂದೆ ಬಿದ್ದ. ಆತನ ವ್ಯಾಮೋಹಕ್ಕೆ ಒಳಗಾದಂತ ಆಕೆ ಸುಂದರ ಸಂಸಾರವಿದ್ದರೂ ಪ್ರಿಯಕರನೊಂದಿಗೆ ಸುತ್ತಾಡಿದ್ದಳು. ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಳು.
ಇದಕ್ಕೆ ಪ್ರಿಯಕರ ನಿರಾಕರಿಸಿದ್ದರಿಂದ ವಿವಾಹಿತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ವಿಜಯನಗರದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎನ್ನುವಂತ ವಿವಾಹಿತ ಮಹಿಳೆಯೊಬ್ಬರು ತುಂಗಭದ್ರಾ ನದಿಯ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದನ್ನು ದಾರಿಹೋಕರು ನೋಡಿದ್ದಾರೆ. ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಮಹಿಳೆಯ ಶವವನ್ನು ನದಿಯಿಂದ ತೆಗೆದಿದ್ದಾರೆ. ಆತ್ಮಹತ್ಯೆಗೆ ಶರಣಾದಂತ ಜಾಗದಲ್ಲಿ ಡೆತ್ ನೋಟ್ ದೊರೆತಿದೆ. ಅದರಲ್ಲಿ ನನ್ನ ಸಾವಿಗೆ ಶಿವಮೊಗ್ಗ ಜಿಲ್ಲೆಯ ಸುಗೂರು ಶಿವಮೂರ್ತಿ, ಪತ್ನಿ ಗಂಗಮ್ಮನ ಮಗ ಬಸವರಾಜ(ವಿನಯ್) ಕಾರಣ ಎಂಬುದಾಗಿ ಬರೆದಿದ್ದಾಳೆ.




