ಹುಬ್ಬಳ್ಳಿ: ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆ ಆಗುವಂತೆ ಒತ್ತಾಯಿಸಿ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಯುವತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿಯು ನಗರದಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಯುವತಿ ಹಾಗೂ ಆರೋಪಿ ಯುವಕ ಕುಂದಗೋಳದವರಾಗಿದ್ದು, ಮೊದಲಿನಿಂದಲೂ ಪರಿಚಯಸ್ಥರಾಗಿದ್ದರು. ಆರೋಪಿಯು ಯುವತಿಯೊಂದಿನ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹಾಗೂ ಕುಟುಂಬಸ್ಥರಿಗೆ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ, ಬೆದರಿಕೆ ಹಾಕಿರುವ ಆರೋಪದ ಮೇಲೆ ದೂರು ಪಡೆದು ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಮಾಹಿತಿ: ಘಟನೆ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪ್ರೀತಿಸುವಂತೆ ಒತ್ತಾಯಿಸಿ, ಆಕೆಯ ಖಾಸಗಿ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಆರೋಪಿ ಯುವಕ ಬೆದರಿಕೆ ಹಾಕಿದ್ದ. ಇತ್ತೀಚೆಗೆ ಯುವತಿಯನ್ನು ಭೇಟಿಯಾಗಲು ಬಂದಿದ್ದ ಆರೋಪಿಯು, ಆಕೆಯ ಕೈ ಹಿಡಿದು ತಿರುವಿ, ಹಲ್ಲೆ ಮಾಡಿದ್ದಾನೆ ಎಂಬ ಆರೋಪವೂ ಇದೆ. ಯುವತಿಯ ಕುಟುಂಬದವರು ದೂರು ಕೊಟ್ಟಿದ್ದಾರೆ. ಯುವಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.