ಚಿಕ್ಕಬಳ್ಳಾಪುರ : ವರಸೆಯಲ್ಲಿ ಅಣ್ಣ-ತಂಗಿಯಾಗಿದ್ದರೂ ಪ್ರೀತಿಸಿ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿ ಶವವಾಗಿ ಪತ್ತೆಯಾದ ಶಾಕಿಂಗ್ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ..
ಮೃತ ಯುವತಿಯನ್ನು ರಾಮಲಕ್ಷ್ಮಿ (21) ಎಂದು ಗುರುತಿಸಲಾಗಿದೆ. ಆಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ರಾಮಕೃಷ್ಣಪುರ ಗ್ರಾಮದ ನಿವಾಸಿ. ರಾಮಲಕ್ಷ್ಮಿ ಮತ್ತು ಕೃಷ್ಣ (30) ಪರಸ್ಪರ ಚಿಕ್ಕಪ್ಪ-ದೊಡ್ಡಪ್ಪ ಮಕ್ಕಳಾಗಿದ್ದು, ಸಮಾಜದ ದೃಷ್ಟಿಯಲ್ಲಿ ಅಣ್ಣ-ತಂಗಿ ವರಸೆಯ ಸಂಬಂಧ ಹೊಂದಿದ್ದರು. ಆದರೆ ಈ ಸಂಬಂಧವನ್ನು ಮೀರಿ ಕಳೆದ ಮೂರು ವರ್ಷಗಳಿಂದ ಇಬ್ಬರೂ ಪ್ರೀತಿಸಿ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಈ ವಿಚಾರ ಗೊತ್ತಾದ ಬಳಿಕ ಎರಡು ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಬ್ಬರಿಗೂ ಹಲವು ಬಾರಿ ಬುದ್ದಿವಾದ ಹೇಳಲಾಗಿತ್ತು. ರಾಮಲಕ್ಷ್ಮಿ ಕುಟುಂಬಸ್ಥರು ಬಾಗೇಪಲ್ಲಿ ಪಟ್ಟಣದಲ್ಲಿ ಪ್ರತ್ಯೇಕವಾಗಿ ವಾಸಕ್ಕೆ ತೆರಳಿದ್ದರು.
ಈ ನಡುವೆ ಕೃಷ್ಣನಿಗೆ ಕುಟುಂಬದವರ ಒತ್ತಾಯದ ಮೇರೆಗೆ ಮತ್ತೊಬ್ಬ ಯುವತಿಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದರೂ ಕೃಷ್ಣ ತನ್ನ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದ ಎನ್ನಲಾಗಿದೆ.
ರಾಮಲಕ್ಷ್ಮಿಯೊಂದಿಗೆ ಮನೆ ಮಾಡಿಕೊಂಡು, ಪೆರೇಸಂದ್ರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೂ ಒಂದೇ ರೂಂನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಶನಿವಾರ ಬೆಳಿಗ್ಗೆ ರಾಮಲಕ್ಷ್ಮಿ ಮನೆ ಒಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೆರೇಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತಳ ಅಕ್ಕ ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಮಲಕ್ಷ್ಮಿಯ ಸಾವಿಗೆ ಕೃಷ್ಣನೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
‘ಮದುವೆಯಾದರೂ ನನ್ನ ತಂಗಿಯನ್ನು ಬಿಡದೇ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಅವನೇ ನನ್ನ ತಂಗಿಯ ಜೀವಕ್ಕೆ ಕಾರಣ’ ಎಂದು ಮೃತಳ ಅಕ್ಕ ಕಣ್ಣೀರಿಟ್ಟಿದ್ದಾಳೆ.




