ಧಾರವಾಡ: ಮದುವೆ ಸಿದ್ಧತೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ಯುವ ಮುಖಂಡನ ಮನೆಯೊಳಗೆ ನುಗ್ಗಿ ಹತ್ಯೆ ಮಾಡಿರುವ ಘಟನೆ ಮಾಳಾಪೂರದ ಹಾಶ್ಮಿ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಫೈರೋಜ್ ಪಠಾಣ್(27) ಹತ್ಯೆಯಾದವ. ಮನೆಯಲ್ಲಿದ್ದ ಫೈರೋಜ್ ಮೇಲೆ ದುಷ್ಕರ್ಮಿಗಳ ತಂಡವು ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು, ಮನೆಯ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.
ಈ ವೇಳೆ ಮಧ್ಯೆ ಬಂದ ಕುಟುಂಬಸ್ಥರ ಮೇಲೂ ಹಲ್ಲೆಯಾಗಿದ್ದು, ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಫೈರೋಜನನ್ನು ಜಿಲ್ಲಾಸ್ಪತ್ರೆಗೆ ಕರೆ ತರುವಷ್ಟರಲ್ಲಿ ಅಸು ನೀಗಿದ್ದಾನೆ. ಕಾಂಗ್ರೆಸ್ ಪಕ್ಷದ ಯುವ ಘಟಕದಲ್ಲಿ ಗುರುತಿಸಿಕೊಂಡಿದ್ದ ಈತನ ಮದುವೆ ಏ.26ಕ್ಕೆ ನಿಶ್ಚಿಯವಾಗಿತ್ತು.
ಹೀಗಾಗಿ ಕೆಲ ದಿನಗಳಿಂದ ಈ ಮದುವೆ ತಯಾರಿಯಲ್ಲಿದ್ದಾಗಲೇ ಈಗ ಈತನ ಮೇಲೆ ದುಷ್ಕರ್ಮಿಗಳ ತಂಡವು ಮನೆಗೆ ನುಗ್ಗಿ ಹತ್ಯೆ ಮಾಡಿದೆ. ಈ ದುರ್ಘಟನೆ ಬಳಿಕ ಮನೆಯ ಸುತ್ತ ಜನ ಜಮಾಯಿಸಿದ್ದು, ಘಟನಾ ಸ್ಥಳಕ್ಕೆ ಉಪನಗರ ಹಾಗೂ ಶಹರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.




