ಚಿಕ್ಕೋಡಿ: ಭಾರೀ ಮಳೆ ಬಂದಾಗ ಹಾವುಗಳು ಮನೆಯೊಳಕ್ಕೆ ಸೇರಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿಯಲ್ಲಿ ಭಾರೀ ಗಾತ್ರದ ಮೊಸಳೆಯೊಂದು ಅತಿಥಿಯಂತೆ ಮನೆಯೊಳಕ್ಕೆ ಬಂದ ಘಟನೆ ನಡೆದಿದೆ.
ಸುಟ್ಟಟ್ಟಿ ಗ್ರಾಮದ ಆಲಗೂರ ತೋಟದ ವಸತಿ ಬಳಿ ದಿಢೀರನೆ 15 ಅಡಿ ಮೊಸಳೆ ಪ್ರತ್ಯಕ್ಷವಾಗಿದೆ.ಮನೆಯೊಳಗೆ ಮೊಸಳೆ ನುಗ್ಗಿದೆ ಎಂದು ಹೆದರಿಕೊಳ್ಳದೇ ಯುವಕರು ಅದನ್ನು ಸೆರೆಹಿಡಿದಿದ್ದಾರೆ.
ನಂತರ ಮೊಸಳೆಯನ್ನು ಗಿಡಕ್ಕೆ ಕಟ್ಟಿ ಅಥಣಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಸುರಕ್ಷಿತ ಕ್ರಮದಲ್ಲಿ ಮೊಸಳೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಿದ್ದಾರೆ.
ಸೆರೆಹಿಡಿಯುವಾಗ ಮೊಸಳೆ ಪ್ರತಿರೋಧ ಒಡ್ಡಿದೆ. ಆದರೂ ಬಿಡದೇ ನಾಲ್ಕೈದು ಜನ ಯುವಕರು ಸೇರಿಕೊಂಡು ಮೊಸಳೆಯನ್ನು ಸೆರೆಹಿಡಿಯುವ ರೋಚಕ ವೀಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.