ಚೇಳೂರು : ಪ್ರೀತಿಸಿ ಮದುವೆಯಾಗಿದ್ದ ಮೊಮ್ಮಗಳ 40 ದಿನದ ಹಸುಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಅಜ್ಜಿ ಮೆಹಬೂಬಿಯನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಮಗುವಿನ ಸಾವು ಕೊಲೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ತಾನೇ ಮಗುವನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ:
ಚೇಳೂರು ಪಟ್ಟಣದ 17 ವರ್ಷದ ಬಾಲಕಿಯೊಬ್ಬಳು ಚಿಂತಾಮಣಿಯ ಕಾಲೇಜಿನಲ್ಲಿ ಓದುತ್ತಿದ್ದಾಗ ರಾಜೇಶ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇವರಿಗೆ 2025ರ ನವೆಂಬರ್ 12ರಂದು ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು.
ಡಿಸೆಂಬರ್ನಲ್ಲಿ ಬಾಲಕಿಯು ಮಗುವಿನೊಂದಿಗೆ ಚೇಳೂರಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದಳು. ಈ ವೇಳೆ ಮಗುವನ್ನು ಪೋಷಿಸುವ ಜವಾಬ್ದಾರಿಯನ್ನು ಅಜ್ಜಿ ಮೆಹಬೂಬಿ ವಹಿಸಿಕೊಂಡಿದ್ದರು.
ಆದರೆ, ಕೆಲವು ದಿನಗಳ ಬಳಿಕ ಮಗು ಮೃತಪಟ್ಟಿರುವುದಾಗಿ ಅಜ್ಜಿ ತಿಳಿಸಿದ್ದರು. ಅಜ್ಜಿಯೇ ಮಗುವನ್ನು ಕೊಂದಿದ್ದಾರೆ ಎಂದು ಅನುಮಾನಗೊಂಡ ಬಾಲಕಿ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ತನಿಖೆ ಮತ್ತು ಪಂಚನಾಮೆ:
ಬಾಲಕಿಯ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಅಪರಾಧ ವಿಭಾಗದ ತನಿಖಾ ತಂಡವು, ತಹಶೀಲ್ದಾರ್ ಶ್ವೇತಾ, ತಾಲ್ಲೂಕು ಆರೋಗ್ಯ ಅಧಿಕಾರಿ ಸುಜಿತ್ ರೆಡ್ಡಿ ಹಾಗೂ ವೈದ್ಯಾಧಿಕಾರಿ ಭಾಸ್ಕರ್ ಅವರ ಸಮಕ್ಷಮದಲ್ಲಿ 2025ರ ಡಿಸೆಂಬರ್ 24ರಂದು ಹೂತಿದ್ದ ಮಗುವಿನ ಶವವನ್ನು ಹೊರತೆಗೆದು ಪಂಚನಾಮೆ ನಡೆಸಿ ಶವಪರೀಕ್ಷೆಗೆ ಒಳಪಡಿಸಿತ್ತು.
ಇದೀಗ ವರದಿ ಲಭ್ಯವಾಗಿದ್ದು, ಹಸುಳೆಯ ಸಾವು ನೈಸರ್ಗಿಕವಲ್ಲ, ಉಸಿರುಗಟ್ಟಿಸಿ ಮಾಡಿದ ಕೊಲೆ ಎಂಬುದು ಸಾಬೀತಾಗಿದೆ.




