ಧಾರವಾಡ:ಉತ್ತರ ಕರ್ನಾಟಕದ ಅತ್ಯಾಧುನಿಕ ಹೃದಯ ಆರೈಕೆ ಕೇಂದ್ರವಾದ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ಅಪರೂಪದ ಸಾಧನೆ ಮಾಡಿದೆ. ಹೃದಯದ ಆರೈಕೆಗೆ ಹೆಸರುವಾಸಿಯಾದ ಈ ಕೇಂದ್ರವೂ ಕಳೆದ ವರ್ಷ ವ್ಯಾಸ್ಕ್ಯೂಲರ್ ಚಿಕಿತ್ಸಾ ವಿಭಾಗ ಪ್ರಾರಂಭಿಸಿತ್ತು, ಇದು ಆರಂಭವಾದ ಕೇವಲ ಒಂದು ವರ್ಷದ ಅವಧಿಯಲ್ಲಿಯೇ ೨೫೦ಕ್ಕೂ ಹೆಚ್ಚು ಯಶಸ್ವಿ ಚಿಕಿತ್ಸೆಗಳನ್ನು ನಡೆಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ ಮಾತನಾಡಿ “ನಮ್ಮ ರೋಗಿಗಳಿಗೆ ಲೇಸರ್ ಚಿಕಿತ್ಸೆಯನ್ನು ನೀಡಲು ನಮಗೆ ಹೆಮ್ಮೆ ಎನಿಸುತ್ತಿದೆ. ಈ ತಂತ್ರಜ್ಞಾನವು ರೋಗಿಗಳಿಗೆ ಆರಾಮದೊಂದಿಗೆ ನಿಖರವಾದ ಚಿಕಿತ್ಸೆಯನ್ನು ನೀಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ,” ಎಂದರು.
ಈ ಕೇಂದ್ರವು ಫೆರಿಫೆರಲ್ ವ್ಯಾಸ್ಕ್ಯೂಲರ ರೋಗದಿಂದ ( Peripheral Vascular Disease (PVD) ಯಿಂದ ಬಳಲುತ್ತಿರುವ ರೋಗಿಗಳಿಗೆ ಸುಧಾರಿತ ಎಂಡೋವ್ಯಾಸ್ಕ್ಯಲರ್ ಅಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟಿಂಗ್ಅನ್ನು ಸಹ ನೀಡುತ್ತಿದೆ. ಇಲ್ಲಿಯವರೆಗೆ ೮೦ಕ್ಕೂ ಹೆಚ್ಚು ಯಶಸ್ವಿ ಎಂಡೋವ್ಯಾಸ್ಕ್ಯಲರ್ ಚಿಕಿತ್ಸೆಗಳನ್ನು ನಡೆಸಲಾಗಿದೆ, ಎಂದು ಡಾ. ಆನೂರ್ ಶೆಟ್ರು ತಿಳಿಸಿದರು.
ಈ ಕಾಯಿಲೆಯು ಹೃದಯ ಮತ್ತು ಮೆದುಳಿನ ಹೊರಗಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ, ಸಾಮಾನ್ಯವಾಗಿ ಕಾಲುಗಳು ಮತ್ತು ಪಾದಗಳಲ್ಲಿ ಇದು ನೋವು, ಮರಗಟ್ಟುವಿಕೆ ಮತ್ತು ತೀವ್ರ ತರವಾದ ಪ್ರಕರಣಗಳಲ್ಲಿ ಪಾದದ ಗ್ಯಾಂಗ್ರೀನ್ ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ತನ್ನ ಹೊಸ ಮಧುಮೇಹ ಪಾದ ಚಿಕಿತ್ಸಾಲಯವನ್ನು ಪ್ರಾರಂಭಿಸುತ್ತಿದೆ. ಇದು ಮಧುಮೇಹ ದಿಂದ ಪಾದಗಳಲ್ಲಿ ಉಂಟಾಗುವ ಸಮಸ್ಯೆಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಮೀಸಲಾದ ಸೌಲಭ್ಯವಾಗಿದೆ ಎಂದು ಡಾ. ಆನೂರ್ ಶೆಟ್ರು ತಿಳಿಸಿದರು,
ಈ ಚಿಕಿತ್ಸಾಲಯವು ಅತಿ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದರು. ಜಾಗತಿಕವಾಗಿ ಮಧುಮೇಹ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಪಾದದ ಸಮಸ್ಯೆಗಳು ಮಧುಮೇಹಿ ರೋಗಿಗಳಿಗೆ ಅತ್ಯಂತ ಗಂಭೀರವಾದ ಮತ್ತು ತಡಗಟ್ಟುಬಹುದಾದ ಸಮಸ್ಯೆಗಳಲ್ಲಿ ಒಂದಾಗಿದೆ. ಹೊಸ ಚಿಕಿತ್ಸಾಲಯವು ಸುಧಾರಿತ ರೋಗ ನಿರ್ಣಯ ಸಾಧನಗಳು, ಅತ್ಯಂತ ಶಿಸ್ತಿನ ಆರೈಕೆ ತಂಡಗಳು ಮತ್ತು ಸಾಕ್ಷ್ಯಾಧಾರಿತ ಚಿಕಿತ್ಸಾ ಪ್ರೋಟೋಕಾಲ್ ಗಳನ್ನು ಹೊಂದಿದ್ದು, ಮಧುಮೇಹ ಪಾದದ ಹುಣ್ಣುಗಳು, ಸೊಂಕುಗಳು ಮತ್ತು ಬಾಹ್ಯ ನರರೋಗ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳ ಸಮಗ್ರ ನಿರ್ವಹಣೆಯನ್ನು ಖಚಿತ ಪಡಿಸುತ್ತದೆ ಎಂದರು.
“ಗ್ಯಾಂಗ್ರಿನ್ ನಿಂದಾಗಿ ಕಾಲು ಕತ್ತರಿಸುವಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆ ಹಚ್ಚಲು ಮತ್ತು ವಿಶೇಷ ಆರೈಕೆಯನ್ನು ಒದಗಿಸಲು ಈ ನಮ್ಮ ಹೊಸ ಸೇವೆಯ ಗುರಿಯಾಗಿದೆ,” ಎಂದು ಡಾ. ಬಸವರಾಜೇಂದ್ರ ಹೇಳಿದರು.
ಗೋಷ್ಠಿಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಶಿಕುಮಾರ ಪಟ್ಟಣಶೆಟ್ಟಿ, ಸೀನಿಯರ್ ಮಾರ್ಕೇಟಿಂಗ್ ಮ್ಯಾನೇಜರ್ ಶ್ರೀ ಅಜೇಯ ಹುಲಮನಿ, ಡೆಪ್ಯೂಟಿ ಮ್ಯಾನೇಜರ್ ಶ್ರೀ ದುಂಡೇಶ ತಡಕೋಡ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ:ಸುಧೀರ್ ಕುಲಕರ್ಣಿ