ತೆಲುಗು ಸ್ಟಾರ್ ನಾನಿ ಅಭಿನಯದ ‘ಹಿಟ್ 3’ ಚಿತ್ರ ಮೇ 1ರಂದು ಬಿಡುಗಡೆಯಾಗಲು ಸಜ್ಜಾಗುತ್ತಿದ್ದು, ಈ ಚಿತ್ರದ ಮೂಲಕ ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಕೂಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಗಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಅವರು, ಕಚ್ಚಾ ಭಾವನೆ ಮತ್ತು ಶಕ್ತಿಯಿಂದ ಮಿಡಿಯುವ ಹಾಡೊಂದಕ್ಕೆ ಸಾನ್ವಿ ತಮ್ಮ ಧ್ವನಿಯನ್ನು ನೀಡಿದ್ದಾರೆ. ಸಾನ್ವಿ ಅವರ ಗಾಯನಕ್ಕೆ ನಟ ನಾನಿ ಸೇರಿದಂತೆ ಹಲವು ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
‘ಸಾನ್ವಿಯ ಧ್ವನಿಗೆ ಶಕ್ತಿ ಮತ್ತು ಉದ್ದೇಶವನ್ನು ಮುಟ್ಟುವ ಸಾಮರ್ಥ್ಯವಿದೆ. ಅವರು ಕೇವಲ ಹಾಡನ್ನು ಹಾಡಿಲ್ಲ; ಆ ಮೂಲಕ ಅವರು ಹೇಳಿಕೆ ನೀಡಿದ್ದಾರೆ. ಅವರು ಉದ್ಯಮದಲ್ಲಿ ಉತ್ತಮ ಸಾಧನೆಗಳತ್ತ ಸಾಗುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ’ ಎಂದು ನಾನಿ ಹೇಳಿದರು.
ಸಂಗೀತ ಕ್ಷೇತ್ರದಲ್ಲಿ ಸಾನ್ವಿ ಅವರು ಮಿಂಚಲು ಸಿದ್ಧವಾಗಿದ್ದಾರೆ. ಜಿಮ್ಮಿ ಚಿತ್ರದ ಟೀಸರ್ ಮೂಲಕವೇ ಅವರು ಎಲ್ಲರ ಗಮನ ಸೆಳೆದಿದ್ದರು. ಆ ಟೀಸರ್ ನಲ್ಲಿ ಅವರು ಇಂಗ್ಲಿಷ್ ಹಾಡನ್ನು ಬರೆದು ಹಾಡಿದ್ದರು. ಆ ಹಾಡು ಬೇಗನೆ ವೈರಲ್ ಆಯಿತು. ಅವರ ಪ್ರಭಾವಶಾಲಿ ಸಾಹಿತ್ಯ ಮತ್ತು ಗಾಯನ ಶಕ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಉದಯೋನ್ಮುಖ ಪ್ರತಿಭೆ ಎಂದು ಗುರುತಿಸಿತು.
ಅವರ ಪ್ರತಿ ಹೆಜ್ಜೆಯಲ್ಲೂ ಅವರ ಬೆಂಬಲಕ್ಕೆ ನಿಂತವರು ಅವರ ತಂದೆ ಮತ್ತು ತಾರೆ ಕಿಚ್ಚ ಸುದೀಪ್. ಗಾಯಕಿಯಾಗಿ ಸಾನ್ವಿಯ ಚೊಚ್ಚಲ ಪ್ರವೇಶದ ಕುರಿತು ಮಾತನಾಡಿದ ಅವರು, ‘ಸಾನ್ವಿ ಆತ್ಮವಿಶ್ವಾಸದಿಂದ ಮತ್ತು ದೊಡ್ಡ ವೇದಿಕೆ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿರುವುದನ್ನು ನೋಡುವುದು ನನಗೆ ಹೆಮ್ಮೆಯ ಕ್ಷಣವಾಗಿದೆ. ಸಾನ್ವಿ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಪ್ರತಿಫಲ ಸಿಕ್ಕಿದೆ’ ಎಂದು ಹೇಳಿದರು.
ಶೈಲೇಶ್ ಕೋಲನು ನಿರ್ದೇಶನದ ಹಿಟ್ 3 ನಲ್ಲಿ ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.