ಚಿತ್ರರಂಗ ಮತ್ತು ಕ್ರಿಕೆಟ್ ನಡುವೆ ಅವಿನಾಭಾವ ನಂಟಿದೆ. ಕ್ರಿಕೆಟಿಗರಿಗೆ ನಟಿಯರ ಮೇಲೆ ಪ್ರೀತಿಯಾಗುವುದು ಹೊಸತೇನಲ್ಲ. ಇದೀಗ ಕನ್ನಡದ ನಟಿ ಕ್ರಿಕೆಟಿಗನನ್ನು ಮದುವೆಯಾಗಿದ್ದಾರೆ. ಕ್ರಿಕೆಟರ್ ಶರತ್ ಜೊತೆ ನಟಿ ಅರ್ಚನಾ ಕೊಟ್ಟಿಗೆ ಇಂದು ಸಪ್ತಪದಿ ತುಳಿದಿದ್ದು, ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಡಿಯರ್ ಸತ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ನಟಿ ಅರ್ಚನಾ ಕೊಟ್ಟಿಗೆ, ಅರಣ್ಯಕಾಂಡ, ಕಟ್ಟಿಂಗ್ ಶಾಪ್, ರಕ್ತಾಕ್ಷ, ಹೊಂದಿಸಿ ಬರೆಯಿರಿ, ವಿಜಯಾನಂದ್, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ತ್ರಿಬಲ್ ರೈಡಿಂಗ್, ಶಬರಿ ಸರ್ಚಿಂಗ್ ರಾವಣ, ಅಲಂಕಾರ್ ವಿದ್ಯಾರ್ಥಿ, ಫಾರೆಸ್ಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಶರತ್ ಜೊತೆ ಹಸೆಮಣೆಯೇರಿದ್ದಾರೆ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂತೆ.
ವರದಿಗಳ ಪ್ರಕಾರ, ಇಬ್ಬರೂ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿ ಈಗ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ನವ ಬಾಳಿಗೆ ಕಾಲಿಟ್ಟಿದ್ದಾರೆ. ಶರತ್ ಹಾಗೂ ಅರ್ಚನಾ 8 ವರ್ಷಗಳಿಂದ ಪ್ರೀತಿಯಲ್ಲಿದ್ದು, ತಮ್ಮ ಪ್ರೀತಿಗೀಗ ಮದುವೆ ಮುದ್ರೆ ಒತ್ತಿದ್ದಾರೆ. ಅಭಿಮಾನಿಗಳು ನವದಂಪತಿಗೆ ಪ್ರೀತಿಯ ಮಳೆ ಹರಿಸಿದ್ದಾರೆ.
ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿರುವ ಶರತ್ ಬಿ.ಆರ್ ರಣಜಿ ಟ್ರೋಫಿಗಾಗಿ ಆಡಿದ್ದಾರೆ. ಅಲ್ಲದೇ ಕಳೆದ ವರ್ಷ ಗುಜರಾತ್ ಟೈಟಾನ್ಸ್ ಮೂಲಕ ಐಪಿಎಲ್ಗೂ ಪಾದಾರ್ಪಣೆ ಮಾಡಿದ್ದರು.
ಮಂಗಳವಾರ ಸಂಜೆ ನಡೆದ ಆರತಕ್ಷತೆ ಸಮಾರಂಭಕ್ಕೆ ಸ್ಯಾಂಡಲ್ವುಡ್ ಸ್ಟಾರ್ಸ್ ಸಾಕ್ಷಿಯಾಗಿದ್ದರು. ಹಿತಾ, ಸಾನ್ಯಾ ಅಯ್ಯರ್, ಸಪ್ತಮಿ ಗೌಡ, ಆಶಿಕಾ ರಂಗನಾಥ್, ಖುಷಿ ರವಿ, ಯುವ ರಾಜ್ಕುಮಾರ್, ಸಾನ್ವಿ ಸುದೀಪ್, ದೇವದತ್ ಪಡಿಕಲ್, ಅಮೃತಾ ಅಯ್ಯಂಗರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಕ್ರಿಕೆಟರ್ಸ್ ಆಗಮಿಸಿ ಶುಭ ಹಾರೈಸಿದರು.