Ad imageAd image

ಸಾರ್ವಜನಿಕರ ಮನೆ ಬಾಗಿಲಿಗೆ ಆಡಳಿತ ಯಂತ್ರ: ಶಾಸಕ ಎಸ್.ಎನ್. ಸುಬ್ಬಾರೆಡ್ಡಿ

Bharath Vaibhav
ಸಾರ್ವಜನಿಕರ ಮನೆ ಬಾಗಿಲಿಗೆ ಆಡಳಿತ ಯಂತ್ರ: ಶಾಸಕ ಎಸ್.ಎನ್. ಸುಬ್ಬಾರೆಡ್ಡಿ
WhatsApp Group Join Now
Telegram Group Join Now

ಚೇಳೂರು: ಜನರು ತಮ್ಮ ಸಣ್ಣಪುಟ್ಟ ಕೆಲಸಗಳಿಗಾಗಿ ಅಥವಾ ಅಹವಾಲು ಸಲ್ಲಿಸಲು ತಾಲೂಕು ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಿ, ಅವರ ಮನೆ ಬಾಗಿಲಿಗೇ ಆಡಳಿತ ಯಂತ್ರವನ್ನು ತರುವುದೇ ಜನಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಿಳಿಸಿದರು.

ಚೇಳೂರು ತಾಲೂಕಿನ ನಲ್ಲಗುಟ್ಲಪಲ್ಲಿ ಗ್ರಾಮ ಪಂಚಾಯತ್ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಜನಸ್ಪಂದನ’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಅವರು

ಸುಮಾರು 700ಕ್ಕೂ ಹೆಚ್ಚು ಅರ್ಜಿಗಳು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ 350ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸ್ಥಳದಲ್ಲೇ ಆದೇಶ ಪತ್ರಗಳನ್ನು ನೀಡಲಾಗುತ್ತಿದೆ. ಚೇಳೂರು ತಾಲೂಕಿನಲ್ಲಿ ಈಗಾಗಲೇ ಬಹುತೇಕ ಪಂಚಾಯತಿಗಳಲ್ಲಿ ಈ ಕಾರ್ಯಕ್ರಮ ಮುಕ್ತಾಯವಾಗಿದ್ದು, ಇನ್ನುಳಿದ ಸೋಮನಾಥಪುರ ಮತ್ತು ರಾಶ್ವೇರುವು ಪಂಚಾಯತಿಗಳಲ್ಲಿ ಶೀಘ್ರದಲ್ಲೇ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಇದೇ ವೇಳೆ ಮಾತನಾಡಿದ ತಹಸೀಲ್ದಾರ್ ಶ್ವೇತಾ ಬಿ.ಕೆ. ಅವರು, ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಅಧಿಕಾರಿಗಳೇ ನಿಮ್ಮ ಗ್ರಾಮಕ್ಕೆ ಬಂದು ಅಹವಾಲು ಸ್ವೀಕರಿಸುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಬೇಕು ಎನ್ನುವುದು ನಮ್ಮ ಗುರಿಯಾಗಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ನಾವು ಸನ್ನದ್ಧರಾಗಿದ್ದೇವೆ. ಸಾರ್ವಜನಿಕರು ಈ ಸಭೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸೌಲಭ್ಯಗಳ ವಿತರಣೆ ಮತ್ತು ಸೀಮಂತ ಸಂಭ್ರಮ: ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ವತಿಯಿಂದ 350 ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರಗಳು, ಹಕ್ಕು ಪತ್ರಗಳು, ದುರಸ್ತಿ, ಪೋಡಿ ದಾಖಲೆಗಳು, ಕಂದಾಯ ಗ್ರಾಮದ ಹಕ್ಕುಪತ್ರ ಹಾಗೂ ಜನನ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 30 ಆಶ್ರಯ ಯೋಜನೆ ಹಕ್ಕುಪತ್ರಗಳು ಹಾಗೂ 30 ‘ಈ-ಸ್ವತ್ತು’ ದಾಖಲೆಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಸಿಡಿಪಿಒ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಗರ್ಭಿಣಿ ಮಹಿಳೆಯರ ‘ಸೀಮಂತ’ ಕಾರ್ಯಕ್ರಮದಲ್ಲಿ ಶಾಸಕರು ಸಾಂಪ್ರದಾಯಿಕವಾಗಿ ಬಾಗಿನ ನೀಡಿ ಗೌರವಿಸಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಭೆಯ ನಂತರ ಶಾಸಕರು ಭತ್ತಲವಾರಪಲ್ಲಿ ಮತ್ತು ಗುಂತೂರುಪಲ್ಲಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು. ಅಲ್ಲದೆ, 1.60 ಕೋಟಿ ರೂ. ವೆಚ್ಚದ ಮೂಗಿರೆಡ್ಡಿಪಲ್ಲಿ-ಕೊತ್ತಕೋಟವಾಂಡ್ಲಪಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಡಿಜಿಟಲ್ ಆಡಳಿತಕ್ಕೆ ವೇಗ ನೀಡಲು ಕಂದಾಯ ಇಲಾಖೆಯ ಆರ್.ಐ. ಈಶ್ವರ್ ಮತ್ತು ವಿ.ಎ.ಓ ಅವರಿಗೆ ಶಾಸಕರು ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಇಓ ರಮೇಶ್, ಆರ್.ಐ. ಈಶ್ವರ್, ವೃತ್ತ ನಿರೀಕ್ಷಕ ಶ್ರೀನಿವಾಸ್ ಎಂ., ಪಿ.ಡಿ.ಒ. ನಾರಾಯಣ ಸ್ವಾಮಿ,ಆಹಾರ ನಿರೀಕ್ಷಕರು ಪುಷ್ಪಾ,ಸಮಾಜ ಕಲ್ಯಾಣ ಇಲಾಖೆಯ ಮಂಜುಳಾ,ವಕೀಲರು ಚಂದ್ರಶೇಖರ್ ರೆಡ್ಡಿ, ಕೆಇಬಿ ಲಕ್ಷ್ಮೀ ನಾರಾಯಣ, ಸಿಡಿಪಿಒ ರಾಮಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!