ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಗ್ರಾಮದ ಉಮೇಶ್ ಎಂಬ ರೈತ ಮೆಸ್ಕಾಂ ಬಿಲ್ ನೋಡಿ ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಕಾರಣ, ಅವರಿಗೆ ಬರೋಬ್ಬರಿ 3,20,076 ರೂಪಾಯಿ ಬಿಲ್ ಬಂದಿದೆ. 10 ಎಚ್ಪಿ ಮೋಟರ್ ಬಳಕೆಗೆ ಮೆಸ್ಕಾಂ ಬಿಲ್ ನೀಡಿದೆ.
“ಒಟ್ಟು 13 ವರ್ಷ 4 ತಿಂಗಳ ಬಳಿಕ 3 ಲಕ್ಷಕ್ಕೂ ಹೆಚ್ಚು ರೂಪಾಯಿ ಬಿಲ್ ಬಂದಿದ್ದು, ಕೃಷಿ ಉದ್ದೇಶಕ್ಕಾಗಿ 10 ಎಚ್ಪಿ ಮೋಟರ್ ಬಳಕೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ.
ಬಂಗಾರಪ್ಪ ಸಿಎಂ ಆಗಿದ್ದಾಗ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಿದ್ದರು ಮುಖ್ಯಮಂತ್ರಿ ಬಂಗಾರಪ್ಪ ಕಾಲದಿಂದಲೂ ಉಚಿತ ಪೂರೈಕೆ ಆಗುತ್ತಿದ್ದು ಇದೀಗ ಏಕಾಏಕಿ ಮೆಸ್ಕಾ ಬಿಲ್ ನೀಡಿದೆ” ಎಂದು ರೈತ ಹೇಳಿಕೆ ನೀಡಿದ್ದಾರೆ.
ರೈತನಿಗೆ ಬರೋಬ್ಬರಿ ವಿದ್ಯುತ್ ಬಿಲ್ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಮೆಸ್ಕಾಂ ಅಧಿಕಾರಿಗಳು ಕಾಫಿ ಬೆಳೆಗಾರರಿಗೆ ವಿದ್ಯುತ್ ಉಚಿತ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ 13 ವರ್ಷಕ್ಕೂ ಹೆಚ್ಚು ಕಾಲ ಬಿಲ್ ನೀಡದೆ ಈಗ ಏಕಾಏಕಿ ಬಿಲ್ ನೀಡಿರುವುದರ ಬಗ್ಗೆ ಬಹಳಷ್ಟು ಆಕ್ಷೇಪ ವ್ಯಕ್ತವಾಗಿದೆ.
ಲಕ್ಷಾಂತರ ರೂಪಾಯಿ ಬಿಲ್ ನೋಡಿ ರೈತ ಉಮೇಶ್ ಕಂಗಲಾಗಿದ್ದಾರೆ. 15 ದಿನಗಳ ಒಳಗೆ ಹಣ ಪಾವತಿ ಮಾಡುವಂತೆ ಅವರಿಗೆ ನೋಟಿಸ್ ನೀಡಲಾಗಿದ್ದು, ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಕಡಿತ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ.




