ಅಬುಜಾ: ಮೂರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನೈಜೀರಿಯಾ ತಲುಪಿದ್ದಾರೆ. ವಿಶೇಷವೆಂದರೆ ಬರೋಬ್ಬರಿ 17 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ನೈಜೀರಿಯಾ ತಲುಪಿದ್ದು, ಭವ್ಯ ಸ್ವಾಗತ ನೀಡಲಾಯಿತು.
ಈ ವೇಳೆ ಪ್ರಧಾನಿಯವರಿಗೆ ನೈಜೀರಿಯಾ ಸರ್ಕಾರ ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ ನೀಡಿ ಅಭಿನಂದಿಸಿದೆ. ನೈಜೀರಿಯಾದ ಎರಡನೇ ಅತ್ಯುನ್ನತ ಪುರಸ್ಕಾರ `ದಿ ಗ್ರ‍್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ನೀಡಿ ಗೌರವಿಸಿದೆ.
ಪ್ರಧಾನಿ ಮೋದಿಯವರಿಗೆ ದೇಶವೊಂದು ನೀಡುತ್ತಿರುವ 17ನೇ ಅಂತರರಾಷ್ಟ್ರೀಯ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿ ಪಡೆದುಕೊಂಡ ಪ್ರಧಾನಿ ಮೋದಿ 2ನೇ ಗಣ್ಯರಾಗಿದ್ದಾರೆ. ಇದಕ್ಕೂ ಮುನ್ನ ರಾಣಿ ಎಲಿಜಬೆತ್ ಅವರು 1969ರಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಬಳಿಕ ಮಾತನಾಡಿದ ಮೋದಿ, ನನ್ನನ್ನು ಮತ್ತು ನನ್ನ ನಿಯೋಗವನ್ನು ಸ್ವಾಗತಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನನ್ನ ಮೂರನೇ ಅವಧಿಯ ಆರಂಭದಲ್ಲಿ ನೈಜೀರಿಯಾಕ್ಕೆ ಬರುವ ಅವಕಾಶ ಸಿಕ್ಕಿರುವುದು ನನಗೆ ಸಂತೋಷದ ವಿಷಯ. ಇದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ.
ಕಳೆದ ತಿಂಗಳು ನೈಜೀರಿಯಾದಲ್ಲಿ ಪ್ರವಾಹದಿಂದ ಉಂಟಾದ ಸಾವುಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ನಿಮಗೆ ಸಹಾಯ ಮಾಡಲು ಭಾರತವು 30 ಟನ್ ಮಾನವೀಯ ನೆರವನ್ನು ಕಳುಹಿಸುತ್ತಿದೆ ಎಂದರು.
ನೈಜೀರಿಯಾಕ್ಕೆ ಬ್ರಿಕ್ಸ್‌ನಲ್ಲಿ ಪಾಲುದಾರ ರಾಷ್ಟ್ರದ ಸ್ಥಾನಮಾನ ನೀಡಲಾಗಿದೆ. ಈ ಮಹತ್ವದ ಸಾಧನೆಗಾಗಿ ನಾನು ನೈಜೀರಿಯಾವನ್ನು ಅಭಿನಂದಿಸಲು ಬಯಸುತ್ತೇನೆ. ನೈಜೀರಿಯಾದೊಂದಿಗಿನ ನಮ್ಮ ಪಾಲುದಾರಿಕೆಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದರು.