ಹುಬ್ಬಳ್ಳಿ : ಬಿಜೆಪಿಯವರು ಒಂದೊಂದು ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಈ ಹಬ್ಬದ ನಂತರ, ಆ ಹಬ್ಬದ ನಂತರದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಎಂದು ಸುಮ್ಮನೇ ಹೇಳುತ್ತಾನೇ ಇರುತ್ತಾರೆ ಎಂದು ಶಾಸಕ ಲಕ್ಷ್ಮಣ್ ಸವದಿ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸುತ್ತಿರುವ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ದಸರಾ-ದೀಪಾವಳಿ ಎಲ್ಲವೂ ಮುಗಿತು.
ಸಿಎಂ ಏನಾದ್ರೂ ಬದಲಾವಣೆ ಆಗಿದ್ದಾರಾ ಎಂದು ಪ್ರಶ್ನಿಸಿದ ಸವದಿ, ಪಂಚಮಿ ಬಂದರೂ ಅದನ್ನೇ ಹೇಳುತ್ತಾರೆ. ಇನ್ನು ಮೂರುವರೆ ವರ್ಷವೂ ಅದನ್ನೇ ಹೇಳುತ್ತಾ ಹೋಗುತ್ತಾರೆ.
ಅದಾದ ನಂತರ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಆಗ ಒಂದೆರಡು ತಿಂಗಳು ಕಾದು ಮತ್ತೆ ಸಿಎಂ ಬದಲಾವಣೆಯ ಮಾತುಗಳನ್ನು ಆಡುತ್ತಾರೆ. ಇದನ್ನು ಬಿಟ್ಟು ಬೇರೆ ಮಾತು ಆಡಲು ಬಿಜೆಪಿಯವರಿಗೆ ಬೇರೆ ಅವಕಾಶವಿಲ್ಲ ಎಂದು ಛೇಡಿಸಿದರು.
ಇದಲ್ಲದೇ, ಉಪಚುನಾವಣೆ ಮುಗಿದ ಬಳಿಕ ಬಿಜೆಪಿಯ ಕೆಲ ನನ್ನ ಸ್ನೇಹಿತರು ಆ ಪಕ್ಷ ಬಿಟ್ಟು ಕಾಂಗ್ರೆಸ್ಗೆ ಬರಲು ಸಿದ್ದರಾಗಿದ್ದು, ಅವರ ಹಿತವನ್ನೂ ನಾವು ಕಾಪಾಡಬೇಕಾಗುತ್ತದೆ. ಅವರು ಕಾಂಗ್ರೆಸ್ಗೆ ಬರಲು ಸಿದ್ಧತೆ ನಡೆಸಿದ್ದಾರೆ ಎಂದು ಸ್ಫೋಟಕ ಸಂಗತಿಯನ್ನು ಸವದಿ ಇದೇ ವೇಳೆ ರಿವೀಲ್ ಮಾಡಿದರು.