ಗೋಕಾಕ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬಿದ್ದ ಬೆಂಕಿ: ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ!
ಬೆಳಗಾವಿ: ಜಿಲ್ಲೆಯ ಗೋಕಾಕ ನಗರದಲ್ಲಿ ಇಂದು ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಗೋಕಾಕದ ಪ್ರಸಿದ್ಧ ಲ್ಯಾಂಡ್ ಮಾರ್ಕ್ ಹತ್ತಿರವಿರುವ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ.
ಅಗ್ನಿ ಅವಘಡ ಸಂಭವಿಸಿದ ವೇಳೆ ಮನೆಯೊಳಗಿದ್ದ ಗಂಗಾಧರ ಗುಡಗುಡಿ ಎಂಬುವವರು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆದಿದ್ದಾರೆ. ಜೀವದ ಹಂಗು ತೊರೆದು ಮನೆಯೊಳಗೆ ನುಗ್ಗಿದ ಸಿಬ್ಬಂದಿಗಳು, ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರ ಅವರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವೀರರು: ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಅಪ್ಪಯ್ಯ ಹಮ್ಮಿನಿ, ಮೋಹನ ಜಾಧವ್, ಸಾಗರ ಚೋನ್ನದ, ಶಾನೂರ ಹಾದಿಮನಿ, ಇಟ್ಟಪಗೊಳ, ವಿನಯ ವಡೆರಹಟ್ಟಿ ಹಾಗೂ ಚೇತನ ಚೌಗಲಾ ಅವರು ಈ ಸಾಹಸಮಯ ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.

ಗಾಯಾಳು ಗಂಗಾಧರ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಗೋಕಾಕ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ




