ಚೆನ್ನೈ: ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷವು ತನ್ನ ಮೊದಲ ಹಂತದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲಿ ಮನೆಯೊಡತಿಗೆ ತಲಾ 2 ಸಾವಿರ ರು., ಮಹಿಳೆಯರ ರೀತಿ ಪುರುಷರಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಭಾಗ್ಯ ಸೇರಿ ಐದು ಭರವಸೆಗಳನ್ನು ಘೋಷಿಸಿದೆ.ಪುರುಷರಿಗೂ ಉಚಿತ ಬಸ್ ಪ್ರಯಾಣದ ಘೋಷಣೆ ದೇಶದಲ್ಲೇ ಮೊದಲು ಎನ್ನಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಶನಿವಾರ ಈ ಘೋಷಣೆ ಮಾಡಿದ್ದಾರೆ. ಒಂದು ವೇಳೆ ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವೇನಾದರೂ ಅಧಿಕಾರಕ್ಕೆ ಬಂದರೆ ‘ಕುಲವಿಲಕ್ಕು ಥಿಟ್ಟಂ ಸ್ಕೀಂ’ನಡಿ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬದ ಒಡತಿಯ ಖಾತೆಗೆ ಮಾಸಿಕ 2 ಸಾವಿರ ರು.ಗಳನ್ನು ನೇರವಾಗಿ ಜಮೆ ಮಾಡಲಾಗುವುದು.
ನಗರಸಾರಿಗೆಯಲ್ಲಿ ಪುರುಷರಿಗೂ ಉಚಿತ ಪ್ರಯಾಣದ ಭಾಗ್ಯ ನೀಡಲಾಗುವುದು. ‘ಅಮ್ಮ ಇಳ್ಳಂ’ ಸ್ಕೀಂನಡಿ ಗ್ರಾಮೀಣ ಭಾಗದಲ್ಲಿ ಸರ್ಕಾರದಿಂದಲೇ ಜಾಗ ಖರೀದಿಸಿ ವಸತಿ ರಹಿತರಿಗೆ ಕಾಂಕ್ರೀಟ್ ಮನೆ ನಿರ್ಮಿಸಿ ಕೊಡಲಾಗುವುದು.
ಇನ್ನು ನಗರ ಪ್ರದೇಶದಲ್ಲೂ ಸರ್ಕಾರವೇ ಜಮೀನು ಖರೀದಿಸಿ ಅಪಾರ್ಟ್‌ಮೆಂಟ್ ನಿರ್ಮಿಸುವ ಮೂಲಕ ಸ್ವಂತ ಸೂರಿಲ್ಲದವರಿಗೆ ಉಚಿತ ಸೂರಿನ ವ್ಯವಸ್ಥೆ ಕಲ್ಪಿಸಲಿದೆ ಎಂದು ಹೇಳಿದ್ದಾರೆ.




