ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಮೇಲೆ ಪ್ರಯಾಣಿಕರಿಂದ ದಿನಕ್ಕೊಂದು ಆರೋಪ ಕೇಳಿ ಬರುತ್ತಿದೆ. ವಿಮಾನಗಳ ವಿಳಂಬ ಹಾರಾಟದಿಂದಾಗಿ ಸಂಸ್ಥೆಯ ಮೇಲೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಎನ್ಸಿಪಿ ನಾಯಕಿ (ಶರದ್ ಪವಾರ್ ಬಣ) ಸುಪ್ರಿಯಾ ಸುಳೆ ಅವರು ವಿಮಾನ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಕೂಡ ಆಕ್ರೋಶ ಹೊರಹಾಕಿದ್ದಾರೆ.
ವಾರ್ನರ್ ಅಸಮಾಧಾನವೇನು?: ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಡೇವಿಡ್ ವಾರ್ನರ್, “ನಾವು ಪೈಲಟ್‌ಗಳಿಲ್ಲದ ಏರ್ ಇಂಡಿಯಾ ವಿಮಾನ ಹತ್ತಿದ್ದೇವೆ. ಗಂಟೆಗಟ್ಟಲೆ ಅದರಲ್ಲೇ ಕಾಯುವಂತಾಗಿದೆ. ಪೈಲಟ್‌ಗಳಿಲ್ಲದ ವಿಮಾನಕ್ಕೆ ಪ್ರಯಾಣಿಕರನ್ನು ಏಕೆ ಹತ್ತಿಸುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ, “ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯಿಂದಾಗಿ ಎಲ್ಲಾ ಏರ್ಲೈನ್ಸ್ ಸಂಸ್ಥೆಗಳ ವಿಮಾನಗಳ ಮಾರ್ಗ ಬದಲಾವಣೆ ಮತ್ತು ಕೆಲ ವಿಮಾನಗಳ ಹಾರಾಟ ವ್ಯತ್ಯಯವಾಗಿದೆ. ನಿಮ್ಮ ತಾಳ್ಮೆ ಮತ್ತು ಆಯ್ಕೆಗಾಗಿ ಧನ್ಯವಾದಗಳು” ಎಂದಿದೆ.
ಕೇಂದ್ರ ಸಚಿವರಿಗೆ ಮುರಿದ ಸೀಟು ನೀಡಿದ್ದ ಏರ್ಲೈನ್ಸ್: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಭೋಪಾಲ್ನಿಂದ ನವದೆಹಲಿಗೆ ಪ್ರಯಾಣಿಸಿದ್ದರು. ಅವರಿದ್ದ ಆಸನ ಮುರಿದಿದ್ದು ಎನ್ನಲಾಗಿದೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವರು, ಪ್ರಯಾಣಿಕರಿಂದ ಪೂರ್ಣ ಟಿಕೆಟ್ ದರ ಪಡೆಯುವ ವಿಮಾನಯಾನ ಸಂಸ್ಥೆ ಕಳಪೆ ದರ್ಜೆಯ ಸೌಲಭ್ಯ ನೀಡಿದೆ. ಹಣಕ್ಕೆ ತಕ್ಕ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಇದು ಪ್ರಯಾಣಿಕರಿಗೆ ಮಾಡುವ ಮೋಸ. ನನ್ನ ಪ್ರಯಾಣದ ವೇಳೆ ಸೀಟು ಮುರಿದಿತ್ತು ಎಂದು ತಮಗಾದ ಕಹಿ ಅನುಭವವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಬೇಸರಿಸಿದ್ದ ಎನ್ಸಿಪಿ ನಾಯಕಿ: ಎರಡು ದಿನಗಳ ಹಿಂದಷ್ಟೇ, ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ವಿಮಾನ ತಡವಾದ ಹಾರಾಟಕ್ಕೆ ತೀವ್ರ ಬೇಸರಿಸಿದ್ದರು. ಸಂಸ್ಥೆ ಅಧಿಕ ಮೊತ್ತ ಪಾವತಿಸಿಕೊಂಡು, ಸರಿಯಾದ ಸಮಯಕ್ಕೆ ವಿಮಾನಗಳ ಹಾರಾಟ ನಡೆಸುತ್ತಿಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ಸಂಸ್ಥೆಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದರು.