Ad imageAd image

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜೀವನಶೈಲಿ ಬಹುಮುಖ್ಯ ಪಾತ್ರ ವಹಿಸುತ್ತದೆ : ಅಕ್ಷಯ ಗೋಖಲೆ

Bharath Vaibhav
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜೀವನಶೈಲಿ ಬಹುಮುಖ್ಯ ಪಾತ್ರ ವಹಿಸುತ್ತದೆ : ಅಕ್ಷಯ ಗೋಖಲೆ
WhatsApp Group Join Now
Telegram Group Join Now

ತುರುವೇಕೆರೆ : ಪೋಷಕರನ್ನು ನೋಡಿ ಮಕ್ಕಳು ಬೆಳೆಯುವುದರಿಂದ ಪೋಷಕರ ನಡೆ, ನುಡಿ, ಜೀವನ ಶೈಲಿ ಮಕ್ಕಳ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಕಾರ್ಕಳದ ವಾಗ್ಮಿ, ಉಪನ್ಯಾಸಕಿ ಅಕ್ಷಯ ಗೋಖಲೆ ತಿಳಿಸಿದರು.

ಪಟ್ಟಣದ ಇಂಡಿಯನ್ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಪೋಷಕರು ಮತ್ತು ಶಿಕ್ಷಕರ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಲ್ಲಿ ಬದಲಾವಣೆಯನ್ನು ಬಯಸುವ ನಾವುಗಳು ಮೊದಲು ಬದಲಾಗಬೇಕಿದೆ. ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಬಹಳ ಎಚ್ಚರಿಕೆಯಿಂದ ಎಲ್ಲವನ್ನೂ ಗಮನಿಸುವ ಪೋಷಕರು ಸಂಸ್ಕೃತಿ, ಜೀವನಶೈಲಿಯ ಆಚರಣೆಯಲ್ಲೂ ಎಚ್ಚರವಹಿಸಬೇಕಿದೆ. ಮಕ್ಕಳಲ್ಲಿ ಸಂಸ್ಕಾರ, ಮೌಲ್ಯಗಳು, ಜೀವನಶೈಲಿಯಲ್ಲಿ ಶಿಸ್ತು ಎಲ್ಲವೂ ಪೋಷಕರು ನಡೆದುಕೊಳ್ಳುವ ರೀತಿಯಲ್ಲಿದೆ. ನಮ್ಮನ್ನು ನೋಡಿ ಮಕ್ಕಳು ಕಲಿಯುವುದರಿಂದ ನಾವು ಮೊದಲು ನಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.

ಮಕ್ಕಳು ಇದೇ ಮಾಧ್ಯಮದಲ್ಲಿ, ಇಂತಹ ಶಾಲೆಯಲ್ಲಿ ಕಲಿಯಬೇಕು, ಮುಂದೆ ಇಂತಹ ಉನ್ನತ ವ್ಯಾಸಂಗ ಮಾಡಿದರೆ ಈ ರೀತಿಯ ಉದ್ಯೋಗ ದೊರಕುತ್ತದೆ. ಅವರ ಬದುಕು ಚೆನ್ನಾಗಿರುತ್ತದೆ ಎಂದು ಆಲೋಚಿಸುವ ಪೋಷಕರು ಮನೆಯಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಹಿರಿಯರಿಗೆ ಗೌರವ ಕೊಡುವುದು, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದು, ಗೌರವಯುತವಾಗಿ ಮಾತನಾಡುವುದು, ಸಂಸ್ಕೃತಿ, ಸಂಪ್ರದಾಯದ ಅನುಸರಣೆ, ಶಿಸ್ತುಬದ್ದ ಜೀವನಶೈಲಿ ಇವುಗಳನ್ನು ಮಕ್ಕಳಲ್ಲಿ ಕಾಣಬೇಕಾದರೆ ಇವೆಲ್ಲವೂ ಪೋಷಕರಲ್ಲಿ ಮೊದಲಿರಬೇಕಿದೆ. ಇಲ್ಲವಾದರೆ ಮಕ್ಕಳಲ್ಲಿ ಶಿಕ್ಷಣವನ್ನು ಕಾಣಬಹುದೇ ವಿನಃ, ಸಂಸ್ಕಾರ ಹಾಗೂ ಮೌಲ್ಯಗಳನ್ನು ಕಾಣಲು ಸಾಧ್ಯವಿಲ್ಲ ಎಂದರು.

ಸಭೆಯಲ್ಲಿ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದ ಕಿರಿಯ ಸ್ವಾಮೀಜಿ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ರುದ್ರಯ್ಯ ಹಿರೇಮಠ, ಪ್ರಾಂಶುಪಾಲರಾದ ಪುಷ್ಪಲತಾ ಎಸ್.ಪಾಟೀಲ್, ಮುಖ್ಯಶಿಕ್ಷಕಿ ಶಶಿಕಲಾ ಹಿರೇಮಠ ಹಾಗೂ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು./

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!