ನವದೆಹಲಿ : ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಗುಂಡಿನ ದಾಳಿ ಪ್ರಕರಣ ಸಂಬಂಧ ಭಾರತವು ಮುಂದುವರಿಸಿರುವ ರಾಜತಾಂತ್ರಿಕ ಯುದ್ಧದ ಭಾಗವಾಗಿ ಇದೀಗ ಪಾಕ್ಗೆ ಮತ್ತೊಂದು ಆಘಾತ ನೀಡಿದೆ.
ಪಾಕಿಸ್ತಾನದ ಎಲ್ಲಾ 17 ರೀತಿಯ ವೀಸಾಗಳನ್ನು ರದ್ದುಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶವನ್ನು ಹೊರಡಿಸಿದೆ.ಪಾಕ್ನಿಂದ ಭಾರತಕ್ಕೆ ಆಗಮಿಸುವ ಪಾಕಿಸ್ತಾನದ ಪ್ರಜೆಗಳು 17 ರೀತಿಯ ವೀಸಾ ಬಳಕೆ ಮಾಡುತ್ತಿದ್ದು, ಈ ಎಲ್ಲಾ ಬಗೆಯ ವೀಸಾಗಳನ್ನು ಭಾರತ ರದ್ದು ಮಾಡಿದೆ. ಈಗಾಗಲೇ ಪಾಕ್ ಪ್ರಜೆಗಳು ಭಾರತವನ್ನು ತೊರೆಯಬೇಕು ಎಂದು ಘೋಷಿಸಲಾಗಿದೆ.
ಇನ್ನು ಮಹತ್ವದ ವಿಚಾರವೆಂದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳಲ್ಲಿ ಪಾಕ್ ಪ್ರಜೆಗಳನ್ನು ಪತ್ತೆಹಚ್ಚಿ ಅವರ ದೇಶಕ್ಕೆ ವಾಪಸ್ ಕಳುಹಿಸಬೇಕು ಎಂತಲೂ ರಾಜ್ಯಗಳ ಸಿಎಂಗಳಿಗೆ ಸೂಚನೆಯೂ ನೀಡಿದ್ದಾರೆ.
ಒಂದಾದ ಮೇಲೆ ಒಂದರಂತೆ ಭಾರತವು ಪಾಕ್ಗೆ ತಿರುಗೇಟು ನೀಡುತ್ತಿದ್ದು, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು, ಪಾಕ್ ಎಲ್ಲಾ ನಾಗರಿಕರ ವೀಸಾ ರದ್ದು, ಪಾಕ್ ಅಧಿಕಾರಿಗಳು ಒಂದು ವಾರದೊಳಗೆ ದೇಶ ತೊರೆಯಬೇಕು ಸೇರಿದಂತೆ ಈಗಗಾಲೇ ಅಟ್ಟಾರಿ ಬಾರ್ಡರ್ ಸಹ ಬಂದ್ ಮಾಡಿ ಪಾಕ್ಗೆ ಶಾಕ್ ನೀಡಲಾಗಿದೆ.