—————————ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕುಶಾಲರಾವ್ ಪಾಟೀಲ ಹೇಳಿಕೆ
ಬೀದರ್: ನಗರದ ಅಂಬೇಡ್ಕರ್ ವೃತ್ತದ ಬಳಿ ಶೀಘ್ರ ಅಲ್ಲಮಪ್ರಭು ಪತ್ತಿನ ಸಹಕಾರ ಸಂಘ ನಿಯಮಿತದ ಹೊಸ ಶಾಖೆ ಆರಂಭಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ಹೇಳಿದರು.
ಬಸವ ಮಂಟಪದಲ್ಲಿ ಸೋಮವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಶಾಖೆ ಪ್ರಾರಂಭಿಸಲು ಈಗಾಗಲೇ ಕಟ್ಟಡ ಖರೀದಿಸಲಾಗಿದೆ ಎಂದು ತಿಳಿಸಿದರು.
ಸಂಘ 2024-25ನೇ ಸಾಲಿನಲ್ಲಿ ರೂ. 24.33 ಲಕ್ಷ ನಿವ್ವಳ ಲಾಭ ಗಳಿಸಿದೆ. ಲಾಭದಲ್ಲಿ ಸದಸ್ಯರಿಗೆ ಶೇ 25 ರಷ್ಟು ಪಾಲು ಕೊಡಲಾಗುವುದು ಎಂದು ಘೋಷಿಸಿದರು.
ಪ್ರಸ್ತುತ ಸಂಘ ರೂ. 22.73 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಕಳೆದ ಮಾರ್ಚ್ 31 ರ ವರೆಗೆ ಸದಸ್ಯರಿಗೆ ವಿವಿಧ ರೂಪದ ಒಟ್ಟು ರೂ. 13.99 ಕೋಟಿ ಸಾಲ ವಿತರಿಸಲಾಗಿದೆ. ರೂ. 17.42 ಕೋಟಿ ವಿವಿಧ ಠೇವಣಿ ಇದೆ. ಕಾಯ್ದಿಟ್ಟ ಹಾಗೂ ಇತರ ನಿಧಿಗಳ ಮೊತ್ತ ರೂ. 4.74 ಕೋಟಿ ಆಗಿದೆ ಎಂದು ವಿವರಿಸಿದರು.
ಸಂಘದ ಕರ್ನಾಟಕ ಪದವಿಪೂರ್ವ ಕಾಲೇಜು ಮುಂಭಾಗದ ಶಾಖೆ ವ್ಯವಸ್ಥಾಪಕ ಜಗನ್ನಾಥ ಪಾಟೀಲ ವಾರ್ಷಿಕ ವರದಿ ವಚಿಸಿದರು.
ಚಾರ್ಟೆಡ್ ಅಕೌಂಟೆಂಟ್ ಕೆ.ಕೆ. ಅಟ್ಟಲ್, ಹಿರಿಯ ಸದಸ್ಯರಾದ ರಾಜೇಂದ್ರ ಜೊನ್ನಿಕೇರಿ ಹಾಗೂ ಕಂಟೆಪ್ಪ ಗಂದಿಗುಡೆ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ವಿವೇಕಾನಂದ ಪಟ್ನೆ, ಅಶೋಕ ಶೀಲವಂತ, ಬಸವಕುಮಾರ ಪಾಟೀಲ, ಡಾ. ಶಿವಕುಮಾರ ಪಾಟೀಲ, ಅಪ್ಪಾರಾವ್ ಪಾಟೀಲ, ಶರಣಬಸಪ್ಪ ಪನಶೆಟ್ಟಿ, ಸುಮನ್ ಬಿ. ಪಾಟೀಲ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಸ್ವಾಮಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ವಂದಿಸಿದರು.
ವರದಿ: ಸಂತೋಷ ಬಿಜಿ ಪಾಟೀಲ




