ಧಾರವಾಡ : ಪಿಡಿಒ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮದ ಆರೋಪ ಕೇಳಿಬಂದಿದ್ದು, ಸೀಲ್ ಓಪನ್ ಆಗಿರುವ ಪ್ರಶ್ನೆ ಪತ್ರಿಕೆ ಫೋಟೋ ವೈರಲ್ ಆಗಿದೆ.
ಪಿಡಿಒ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸಾಮಾನ್ಯವಾಗಿ 3 ಹಂತದ ಸೀಲ್ ಭದ್ರತೆ ಹೊಂದಿರುತ್ತವೆ. ಪರೀಕ್ಷಾ ಕೇಂದ್ರದ ಪ್ರಶ್ನೆ ಪತ್ರಿಕೆಗಳ ಬಂಡಲ್ಗೆ ಸಮಗ್ರವಾಗಿ ಪ್ಲಾಸ್ಟಿಕ್ ಕವರ್ನ ಸೀಲ್ ಹಾಕಿರಲಾಗುತ್ತದೆ.
ಬಳಿಕ ಆಯಾ ಪರೀಕ್ಷಾ ಕೊಠಡಿಯ ಪ್ರಶ್ನೆ ಪತ್ರಿಕೆಗಳಿಗೆ ಕಾಗದದ ಕವರ್ನ ಜೊತೆಗೆ ಸೀಲ್ ಹಾಕಿರುತ್ತಾರೆ. ಕೊನೆಗೆ ಪ್ರತಿಯೊಂದು ಪ್ರಶ್ನೆ ಪತ್ರಿಕೆಗೂ ಪ್ರತ್ಯೇಕ ಸೀಲ್ ಇರುತ್ತದೆ.
ಆದರೆ ಪಿಡಿಒ ನೇಮಕಾತಿಗೆ ಸಂಬಂಧಿಸಿ ಡಿಸೆಂಬರ್ 8ರಂದು ಧಾರವಾಡದ ಕೆಎನ್ಕೆ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಕೈ ಸೇರುವ ಮೊದಲೇ ಪ್ರಶ್ನೆ ಪತ್ರಿಕೆ ಸೀಲ್ ಓಪನ್ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಸರಿಯಾಗಿ ಪರೀಕ್ಷೆ ನಡೆಸಿಲ್ಲವೆಂದು ಅಭ್ಯರ್ಥಿಗಳು ಆರೋಪ ಮಾಡಿದ್ದು, ಮರುಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ.
ಕೆಪಿಎಸ್ಸಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮರುಪರೀಕ್ಷೆ ಮಾಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಮನವಿ ಮಾಡಿದೆ. 150 ಪಿಡಿಒ ಹುದ್ದೆಗಳ ನೇಮಕಾತಿಗಾಗಿ ಡಿಸೆಂಬರ್ 8ರಂದು ಪರೀಕ್ಷೆ ನಡೆದಿತ್ತು. ರಾಜ್ಯಾದ್ಯಂತ ಒಟ್ಟಾರೆ 2 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.