ಮಂಡ್ಯ : ಯುವತಿಯೊಬ್ಬಳು ಪ್ರೀತಿಯ ಹೆಸರಿನಲ್ಲಿ ಯುವಕರಿಗೆ ಉಂಡೆನಾಮ ತಿಕ್ಕುವುದನ್ನೇ ಕಾಯಕವಾಗಿಸಿಕೊಂಡಿದ್ದು ಏಕಕಾಲದಲ್ಲಿ ಮೂವರಿಗೆ ಪಂಗನಾಮ ಎಳೆಯುವ ಮೂಲಕ ಪ್ರೇಮ ಕಥಾನಕಕ್ಕೆ ಹೊಸ ಭಾಷ್ಯವನ್ನೇ ಬರೆದಿದ್ದಾಳೆ.
ಇವಳ ಮೋಹದ ಬಲೆಯಲ್ಲಿ ಸಿಲುಕಿ ಹಣ, ಚಿನ್ನ, ಮರ್ಯಾದೆ ಕಳೆದುಕೊಂಡ ಮೂವರು ಯುವಕರಿಗೆ ಈಗ ಲಬೋಲಬೋ ಎಂದು ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಮದ್ದೂರು ತಾಲೂಕಿನ ಕೆಸ್ತೂರಿನ ಯುವತಿ ವೈಷ್ಣವಿ ಎಂಬ ಮಹಾಪ್ರತಿಭೆಯೇ ತನ್ನ ಚಾಣಾಕ್ಷ್ಯ ತನದಿಂದ ಏಕಕಾಲದಲ್ಲಿ ಹಲವರಿಗೆ ಚಳ್ಳೆ ಹಣ್ಣು ತಿನಿಸಿರುವ ಯುವತಿ.
ಹಿಂದೆ ಹಾಸನದ ರಘು ಎಂಬ ಯುವಕನ ಜೊತೆ ವೈಷ್ಣವಿ ಪ್ರೀತಿಯ ನಾಟಕವಾಡುತ್ತಿದ್ದಳು. ಜೊತೆಜೊತೆಯಲ್ಲೇ ಶಿವು ಎಂಬ ಯುವಕನನ್ನೂ ಬುಟ್ಟಿಗೆ ಕೆಡವಿಕೊಂಡಿದ್ದಳು. ರಘು ಈಕೆಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡು ಧರ್ಮಸ್ಥಳದಲ್ಲಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದ.
ಆದರೆ ರಾತ್ರೋ ರಾತ್ರಿ ಗಂಡಿನ ಮನೆಯವರು ಕೊಟ್ಟ ಚಿನ್ನ, ಸೀರೆ, ಹಣದೊಂದಿಗೆ ನಾಪತ್ತೆಯಾಗಿದ್ದ ವೈಷ್ಣವಿ ಶಿವುವನ್ನು ಮದುವೆಯಾಗಿದ್ದಳು. ಈ ಮದುವೆ ಒಂದು ವರ್ಷದಲ್ಲೇ ಕಿತ್ತು ಹೋಗಿ ತವರು ಮನೆ ಸೇರಿಕೊಂಡಿದ್ದಳು.
ಬಳಿಕ ತಾನು ಬೆಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಎಂದು ಬೂಸಿ ಬಿಟ್ಟು ಶಶಿ ಎಂಬ ಯುವಕನನ್ನು ಯಾಮಾರಿಸಿದ್ದ ವೈಷ್ಣವಿ ಆತನನ್ನೂ ಆದಿಚುಂಚನಗಿರಿಯಲ್ಲಿ ಮದುವೆಯಾಗಿದ್ದಳು.
ನಂತರ ತಾನು ಬೆಂಗಳೂರಿಗೆ ಓದಲು ಮರಳುವುದಾಗಿ ಹೇಳಿ ಆತನಿಂದ ಪಿಜಿ, ಮೊಬೈಲು ಖರ್ಚಿಗೆ ಪ್ರತಿ ತಿಂಗಳೂ ಹಣ ಪೀಕುತ್ತಿದ್ದಳು. 15 ಲಕ್ಷ ಕೈಬಿಟ್ಟ ಬಳಿಕ ಶಶಿಗೆ ಅನುಮಾನ ಶುರುವಾಗಿ, ವಿಚಾರಿಸಿದಾಗ ಈಕೆಯ ಸ್ಟಡಿ ಬಗ್ಗೆ ಜ್ಞಾನೋದಯವಾಗಿತ್ತು.ಈಗ ಶಶಿ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ ತನಗೆ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೊಕ್ಕಿದ್ದಾನೆ.