ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲಿನ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ದಾಳಿಯಯ ಬಳಿಕ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ರದ್ದು ಮಾಡಿದೆ.
ಸದ್ಯ ಪಾಕಿಸ್ತಾನದಲ್ಲಿ ನೀರಿನ ಅಭಾವ ಹೆಚ್ಚುತ್ತಿದ್ದು, ಅಣೆಕಟ್ಟುಗಳು ತಳಮಟ್ಟ ತಲುಪಿವೆ.ಈ ಹಿನ್ನೆಲೆಯಲ್ಲಿ ಭಾರತ ಮತ್ತೆ ದೊಡ್ಡ ಮನಸ್ಸು ಮಾಡಿ ಪಾಕಿಸ್ತಾನಕ್ಕೆ ನೀರು ಕೊಡಬಹುದಾ ಎನ್ನುವ ಪ್ರಶ್ನೆ ಅನೇಕರಲ್ಲಿದೆ.ಆದರೆ ಭಾರತ ಪಾಕಿಸ್ತಾನದ ವಿಚಾರದಲ್ಲಿ ದಿಟ್ಟ ನಿಲುವು ಹೊಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಮಾತನಾಡಿದ್ದು,’ಪಾಕಿಸ್ತಾನವು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಸಿಂಧೂ ನದಿ ನೀರು ಒಪ್ಪಂದವನ್ನು ಮುಂದೆಂದಿಗೂ ಮುಂದುವರಿಸಲು ಸಾಧ್ಯವಿಲ್ಲ’ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ.
‘ನಾವು ಭಾರತಕ್ಕೆ ಸೇರಿರುವ ನೀರನ್ನು ನ್ಯಾಯಯುತವಾಗಿ ಬಳಸುತ್ತೇವೆ. ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನೀರನ್ನು ಕಾಲುವೆ ನಿರ್ಮಿಸುವ ಮೂಲಕ ರಾಜಸ್ಥಾನಕ್ಕೆ ಕೊಂಡೊಯ್ಯುತ್ತೇವೆ’ ಎಂದಿದ್ದಾರೆ.
‘ಅಂತರರಾಷ್ಟ್ರೀಯ ಒಪ್ಪಂದಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ ಆದರೆ ಸಿಂಧೂ ನದಿಯ ನೀರನ್ನು ಸ್ಥಗಿತಗೊಳಿಸುವ ಹಕ್ಕು ನಮಗಿತ್ತು, ನಾವು ಅದನ್ನ ಮಾಡಿದ್ದೇವೆ.ಒಪ್ಪಂದದ ಪೀಠಿಕೆಯಲ್ಲಿ ಎರಡೂ ದೇಶಗಳ ಶಾಂತಿ ಮತ್ತು ಪ್ರಗತಿಗಾಗಿ ಈ ಒಪ್ಪಂದ ಎಂದು ಉಲ್ಲೇಖಿಸಲಾಗಿದೆ ಆದರೆ ಒಮ್ಮೆ ಅದನ್ನು ಉಲ್ಲಂಘಿಸಿದರೆ, ರಕ್ಷಿಸಲು ಏನೂ ಉಳಿದಿಲ್ಲ’ ಎಂದಿದ್ದಾರೆ