ತುರುವೇಕೆರೆ: ತಾಲೂಕಿನ ಅಮ್ಮಸಂದ್ರ ರೈಲು ನಿಲ್ದಾಣದ ಬಳಿ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ, ರಸ್ತೆಯಲ್ಲಿ ತೆಂಗಿನ ಸಸಿ ನೆಡುವ ಮೂಲಕ ವಿಭಿನ್ನವಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದಗಂಗಯ್ಯ ಮಾತನಾಡಿ, ಬಹಳ ವರ್ಷಗಳಿಂದ ಅಮ್ಮಸಂದ್ರ, ದಂಡಿನಶಿವರ ರಸ್ತೆ ಹದಗೆಟ್ಟು ಹೋಗಿದೆ. ಗುಂಡಿಗೊಟರುಗಳೇ ತುಂಬಿರುವ ರಸ್ತೆಯಲ್ಲಿ ಪಾದಚಾರಿಗಳು ವಾಹನ ಸವಾರರು ಸಂಚರಿಸವುದೇ ದುಸ್ಥರವಾಗಿ ಅಪಘಾತಗಳು ಸಂಭವಿಸಿದೆ.
ಈ ರಸ್ತೆಯಲ್ಲಿ ದಿನಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಪಕ್ಕದಲ್ಲೇ ರೈಲು ನಿಲ್ದಾಣವಿದೆ. ಬೆಂಗಳೂರು, ಮೈಸೂರು, ತುಮಕೂರು ಶಿವಮೊಗ್ಗಕ್ಕೆ ಸಾರಿಗೆ ಬಸ್ ಸೇರಿದಂತೆ ಖಾಸಗಿ ವಾಹನಗಳು ಸಂಚರಿಸುತ್ತವೆ. ಈಗ ದಂಡಿನಶಿವರದ ಹೊನ್ನಾದೇವಿ ಜಾತ್ರೆ ಪ್ರಾರಂಭವಾಗಿದೆ. ಸಹಸ್ರಾರು ಜನ ಭಕ್ತರು ಜಾತ್ರೆಗೆ ಬರುತ್ತಾರೆ. ಲೋಕೋಪಯೋಗಿ ಇಲಾಖೆಗೆ ರಸ್ತೆ ಸರಿಪಡಿಸಲು ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಅಪಘಾತವಾದರೆ ನಾವೇನು ಮಾಡಲು ಸಾಧ್ಯ ಎಂಬ ಬೇಜವಾಬ್ದಾರಿತನದ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿದರು.
ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯತನ ಖಂಡಿಸಿ, ಕೂಡಲೇ ರಸ್ತೆ ಸರಿಪಡಿಸಲು ಒತ್ತಾಯಿಸಿ ಈ ದಿನ ರಸ್ತೆಯಲ್ಲಿ ತೆಂಗಿನ ಸಸಿನೆಡುವ ಮೂಲಕ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳು, ಜಿಲ್ಲಾ ಅಧಿಕಾರಿಗಳನ್ನು ಒತ್ತಾಯಿಸುತ್ತಿರುವುದಾಗಿ ಹೇಳಿದರು.
ಮುಂದಿನ 15 ದಿನದೊಳಗೆ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳದಿದ್ದರೆ ತುರುವೇಕೆರೆ ಲೋಕೋಪಯೋಗಿ ಇಲಾಖೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಮ್ಮಸಂದ್ರ, ದಂಡಿನಶಿವರ ಸೇರಿದಂತೆ ಆ ಭಾಗದ ವಿವಿಧ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರರ
ವರದಿ: ಗಿರೀಶ್ ಕೆ ಭಟ್