ಉತ್ತರ ಪ್ರದೇಶ: ಇಂದು (ಜನವರಿ 29) ‘ಮೌನಿ ಅಮಾವಾಸ್ಯೆ’ಯ ಕಾರಣ ಪವಿತ್ರ ಸ್ನಾನ ಮಾಡಲು ಅತ್ಯಂತ ಮಂಗಳಕರ ದಿನವಾಗಿದೆ.
ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯನ್ನು ಮೌನಿ ಅಮಾವಾಸ್ಯೆ ಎನ್ನುತ್ತಾರೆ. ಎಲ್ಲಾ ವಿಶೇಷ ಸ್ನಾನದ ದಿನಾಂಕಗಳಲ್ಲಿ ಇದು ಅತ್ಯಂತ ಮಂಗಳಕರ ದಿನಾಂಕವೆಂದು ಪರಿಗಣಿಸಲಾಗಿದೆ.ಈ ದಿನದಂದು, ಪವಿತ್ರ ನದಿಗಳ ನೀರು ‘ಅಮೃತ’ವಾಗಿ ಬದಲಾಗುತ್ತದೆ ಎಂದು ನಂಬಲಾಗಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್ನ ಸಂಗಮ ನಗರದಲ್ಲಿ ಇಂದು ಮೌನಿ ಅಮಾವಾಸ್ಯೆ ಪ್ರಯುಕ್ತ ಅಮೃತ ಸ್ನಾನದಲ್ಲಿ ಪಾಲ್ಗೊಳ್ಳಲು ಕೋಟ್ಯಾಂತರ ಭಕ್ತರು ಆಗಮಿಸಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಸಂಗಮದಲ್ಲಿ ಅಮೃತ ಸ್ನಾನಕ್ಕೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 12 ರವರೆಗೆ, 4.2 ಕೋಟಿ ಭಕ್ತರು ‘ಅಮೃತ ಸ್ನಾನ’ದಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿಯವರೆಗೆ 22 ಕೋಟಿ ಭಕ್ತರು ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಪ್ರತಿ ಗಂಟೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಸಂತರು ಮತ್ತು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಸಂಗಮ ಘಾಟ್‌ಗೆ ಆಗಮಿಸುತ್ತಿದ್ದಾರೆ. ಕಾಲ್ತುಳಿತದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಮೃತ ಸ್ನಾನ ಮತ್ತೆ ಶುರುವಾಗಿದೆ.
ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆ ನಿಮಿತ್ತ ಎರಡನೇ ಅಮೃತ ಸ್ನಾನಕ್ಕಾಗಿ ತ್ರಿವೇಣಿ ಸಂಗಮ ಘಾಟ್‌ಗೆ ಸಂತರು ಮೆರವಣಿಗೆ ಮೂಲಕ ತೆರಳಿದರು.
ಮಹಾಕುಂಭದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಕ್ತರ ನಂತರ ‘ಅಮೃತ ಸ್ನಾನ’ಕ್ಕೆ ಹೋಗಲು ಅಖಾಡಾಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಅಲ್ಲದೆ ಸುಮಾರು 8 ರಿಂದ 10 ಕೋಟಿ ಜನರು ಪ್ರಯಾಗರಾಜ್ನಲ್ಲಿ ಇದ್ದಾರೆ ಎಂದು ಅವರು ತಿಳಿಸಿದರು.