ಅಮರಾವತಿ: ಆಂಧ್ರಪ್ರದೇಶದ ರಾಜಧಾನಿ ವಿಚಾರದಲ್ಲಿದ್ದ ದಶಕಗಳ ಅನಿಶ್ಚಿತತೆಗೆ ಕೊನೆಬಿದ್ದಿದೆ. ಆಂಧ್ರಪ್ರದೇಶ ಮರುಸಂಘಟನೆ (ತಿದ್ದುಪಡಿ) ಕಾಯ್ದೆ-2026ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕೃತವಾಗಿ ಅಂಕಿತ ಹಾಕುವ ಮೂಲಕ, ಅಮರಾವತಿಯು ರಾಜ್ಯದ ಕಾನೂನುಬದ್ಧ ರಾಜಧಾನಿಯಾಗಿ ಹೊರಹೊಮ್ಮಿದೆ.
‘ದೀರ್ಘಕಾಲದ ಕನಸು ನನಸಾಗಿದೆ’: ಸಿಎಂ ಚಂದ್ರಬಾಬು ನಾಯ್ಡು
ರಾಷ್ಟ್ರಪತಿಗಳ ಈ ನಿರ್ಧಾರವನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಈ ಕುರಿತು ‘X’ (ಟ್ವಿಟರ್) ನಲ್ಲಿ ಸಂತಸ ಹಂಚಿಕೊಂಡಿರುವ ಅವರು, ಇದು ಆಂಧ್ರಪ್ರದೇಶದ ಜನರ ದೀರ್ಘಕಾಲದ ಕನಸು. ಕೇಂದ್ರ ಸರ್ಕಾರದ ಬೆಂಬಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಿಂದಾಗಿ ಇದು ಸಾಧ್ಯವಾಗಿದೆ” ಎಂದು ಧನ್ಯವಾದ ಅರ್ಪಿಸಿದ್ದಾರೆ. ವಿಶೇಷವಾಗಿ ಅಮರಾವತಿಯ ರೈತರನ್ನು ಸ್ಮರಿಸಿರುವ ನಾಯ್ಡು, “ಇದು ನನ್ನ ಜನರ ಮತ್ತು ಭೂಮಿ ನೀಡಿದ ರೈತರ ಹೋರಾಟಕ್ಕೆ ಸಂದ ಜಯ” ಎಂದು ಬಣ್ಣಿಸಿದ್ದಾರೆ.
ಐತಿಹಾಸಿಕ ದಿನ ಎಂದ ನಾರಾ ಲೋಕೇಶ್
ರಾಜ್ಯದ ಐಟಿ ಮತ್ತು ಶಿಕ್ಷಣ ಸಚಿವ ನಾರಾ ಲೋಕೇಶ್ ಪ್ರತಿಕ್ರಿಯಿಸಿ, “ಇದು ಪ್ರತಿಯೊಬ್ಬ ಆಂಧ್ರದ ಪ್ರಜೆಯ ಪಾಲಿಗೆ ಐತಿಹಾಸಿಕ ದಿನ. ರೈತರ ತಾಳ್ಮೆ, ಬಲಿದಾನ ಮತ್ತು ಜನರ ಸಂಕಲ್ಪಕ್ಕೆ ಇಂದು ನ್ಯಾಯ ಸಿಕ್ಕಿದೆ” ಎಂದು ಹೇಳಿದ್ದಾರೆ.
ಬಿಜೆಪಿ ಹರ್ಷ
ಆಂಧ್ರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಪಿ.ವಿ.ಎನ್. ಮಾಧವ್ ಅವರು ಕೂಡ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ರಾಷ್ಟ್ರಪತಿಗಳ ಅಂಕಿತ ಮತ್ತು ಅಧಿಕೃತ ಗೆಜೆಟ್ ಅಧಿಸೂಚನೆಯೊಂದಿಗೆ ಅಮರಾವತಿಗೆ ಈಗ ಶಾಶ್ವತ ಮಾನ್ಯತೆ ಲಭಿಸಿದೆ, ಇದು ರಾಜ್ಯದ ಅಭಿವೃದ್ಧಿಗೆ ಹೊಸ ತಿರುವು ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ:
2014ರಲ್ಲಿ ರಾಜ್ಯ ವಿಭಜನೆಯಾದಾಗಿನಿಂದಲೂ ರಾಜಧಾನಿ ವಿಚಾರವಾಗಿ ಆಂಧ್ರಪ್ರದೇಶದಲ್ಲಿ ಸಾಕಷ್ಟು ರಾಜಕೀಯ ಸಂಘರ್ಷಗಳು ನಡೆದಿದ್ದವು. ಈ ಹೊಸ ಕಾಯ್ದೆಯು ಆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ರಾಜ್ಯದ ಅಭಿವೃದ್ಧಿಗೆ ಸ್ಪಷ್ಟ ಹಾದಿ ಮಾಡಿಕೊಟ್ಟಿದೆ.




