ನಾಸಿಕ್: ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ ನಡೆದಿರುವ ಕೋಟಿ ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಸಿಕ್ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ದರೋಡೆ ಕೇಸ್ ನಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಗೋವಾದಿಂದ ಮಹಾರಾಷ್ಟ್ರಕ್ಕೆ ಹಣ ಸಾಗಿಸುತ್ತಿದ್ದಾಗ ಅಕ್ಟೋಬರ್ 2025ರ ಅಕ್ಟೋಬರ್ 16ರಂದು ಬೆಳಗಾವಿಯ ಚೋರ್ಲಾ ಘಾಟ್ ಬಳಿ 2 ಕಂಟೇನರ್ಗಳನ್ನು ಹೈಜಾಕ್ ಮಾಡಿ 400 ಕೋಟಿ ರೂ ಹಣವನ್ನು ದರೋಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಚೋರ್ಲಾ ಘಾಟ್ ನಲ್ಲಿ ನಡೆದಿದ್ದು 400 ಕೋಟಿಯಲ್ಲ ಬರೋಬ್ಬರಿ 1000 ಕೋಟಿ ದರೋಡೆ ಎಂದು ದೂರುದಾರ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಸಂದೀಪ್ ಪಾಟೀಲ್ ನೀಡಿರುವ ದೂರಿನ ಮೇರೆಗೆ ನಾಸಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕರ್ನಾಟಕದ ಬೆಳಗಾವಿ ಪೊಲೀಸರು ತನಿಖೆಗೆ ಸಹಾಯ ಮಾಡುವಂತೆ ಕೋರಿದ್ದಾರೆ.
ಈ ನಡುವೆ ನಾಸಿಕ್ ಎಸ್ ಐಟಿ ಪೊಲೀಸರು ದರೋಡೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮಚೀಂದ್ರ ಮಾದವಿ ಎಂದು ಗುರುತಿಸಲಾಗಿದೆ.
ಜನವರಿ 23ರಂದು ನಾಸಿಕ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಇಂದು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ತನಿಖೆ ಚುರುಕುಗೊಂಡಿದೆ.
ಗೋವಾದಿಂದ ಮಹಾರಾಷ್ಟ್ರಕ್ಕೆ ಹಣ ಸಾಗಿಸುತ್ತಿದ್ದ 2 ಕಂಟೇನರ್ಗಳನ್ನು ಹೈಜಾಕ್ ಮಾಡಲಾಗಿದೆ. 2025 ಅಕ್ಟೋಬರ್ 16ರಂದು ಈ ಘಟನೆ ನಡೆದಿದೆ.
ನನ್ನನ್ನು ಒಂದುವರೆ ತಿಂಗಳ ಕಾಲ ಕೂಡಿಟ್ಟು ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೇ ಮಹಾರಾಷ್ಟ್ರ ಇಬ್ಬರು ಪೊಲೀಸರು ನನಗೆ ಜೀವ ಬೆದರಿಕೆ ಹಾಕಿದ್ದು, ರಕ್ಷಣೆ ನೀಡುವಂತೆ ಸುದೀಪ್ ಪಾಟೀಲ್ ವಿಡಿಯೋ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಾಬರಿಯಿಂದ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ. ಹಾಗಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಪೊಲೀಸರು ಕಂಟೇನರ್ ಹುಡುಕಾಟ ನಡೆಸಿದ್ದಾರೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಪ್ರಕರಣ ತನಿಖೆಗೆ ಎಸ್‌ಐಟಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ. ಸದ್ಯ ರಾಬರಿ ಆಗಿರುವ ಭಾರಿ ಮೊತ್ತವು ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ಗೆ ಸೇರಿದ್ದು ಎನ್ನಲಾಗುತ್ತಿದೆ.
ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬಾತನ ಅಪಹರಣದಿಂದ ಪ್ರಕರಣ ಬೆಳಕಿಗೆ ಬಂದಿದೆ. ಕಂಟೇನರ್ ರಾಬರಿ ಆದ ಬಳಿಕ ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಸಹಚರರು ಸಂದೀಪ್ ಪಾಟೀಲ್ಗೆ ಗನ್ ಪಾಯಿಂಟ್ ತೋರಿಸಿ ಅಪಹರಿಸಿದ್ದರು. ಒಂದೂವರೆ ತಿಂಗಳು ಒತ್ತೆಯಾಳಾಗಿಸಿಕೊಂಡು ಚಿತ್ರಹಿಂಸೆ ನೀಡಿದ್ದಾರೆ. ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ ಎಂದು ಸಂದೀಪ್‌ಗೆ ಚಿತ್ರಹಿಂಸೆ ನೀಡಿದ್ದಾರೆ.
ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಸಂದೀಪ್ ನಾಸಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಟ್ಟಾರೆ ಬೆಳಗಾವಿಯ ಚೋರ್ಲಾಘಾಟ್ ನಲ್ಲಿ ನಡೆದ ದರೋಡೆ ಪ್ರಕರಣ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಪೊಲೀಸರಿಗೆ ದೊಡ್ಡ ಸವಾಲಾಗಿದೆ.




