ಇಳಕಲ್: ಸಮೀಪದ ಹಿರೇಸಿಂಗನಗುತ್ತಿ ಗ್ರಾಮದ ಕವಿ ಕಲಾವಿದ ಚಿತ್ರಕಲಾ ಶಿಕ್ಷಕ ಬಿ ತಿರುಪತಿ ಶಿವನಗುತ್ತಿ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಸ್ವತಃ ರಚಿಸಿ ಹಾಡಿದ ಮತದಾನ ಜಾಗೃತಿ ಗೀತೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮತದಾನ ನಮ್ಮ ಹಕ್ಕು ಮರಿಲಾರದೇ ಮತವ ಹಾಕು, ಮತದಾರ… ಪ್ರಜಾಪ್ರಭುತ್ವಕೆ ನೀ ಸೂತ್ರಧಾರ, ಮತವನ್ನು ಹಾಕುವ ಮತದಾರನೇ ದೇಶದ ಏಳ್ಗೆಗೆ ಆಧಾರವು ಹಾಗೂ ಮರೆಯದೆ ಮತವನು ಹಾಕೋಣ, ಸರಿಯಾದ ವ್ಯಕ್ತಿಗಳ ಆರಿಸೋಣ ಎನ್ನುವ ಗೀತೆಗಳ ಮುಖಾಂತರ ಮತದಾನದ ಮಹತ್ವ, ಮತದಾರರ ಜವಾಬ್ದಾರಿ, ಮತದಾನದ ಹಕ್ಕು ಸಿಗಲು ನಡೆದ ಹೋರಾಟ ಮತ್ತು ಸಂವಿಧಾನದ ಆಶಯಗಳನ್ನು ಮತದಾರರಿಗೆ ತಿಳಿಸಿಕೊಟ್ಟಿದ್ದಾರೆ.
ಕಳೆದ ಜನೆವರಿ 26 ರಂದು ಸಂವಿಧಾನ ಜಾರಿಗೆ ಬಂದ ಪ್ರಜಾಪ್ರಭುತ್ವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬೃಹತ್ ಗಾತ್ರದ ಸಂವಿಧಾನ ಗ್ರಂಥದ ಮಾದರಿಯನ್ನು ತಯಾರಿಸಿ ಭವ್ಯ ಮೆರವಣಿಗೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸದಾ ಒಂದಿಲ್ಲೊಂದು ಹೊಸತನ ಹುಟ್ಟು ಹಾಕಿ ವಿಶಿಷ್ಟ ರೀತಿಯಲ್ಲಿ ಸಾಧನೆ ಮಾಡುತ್ತಿರುವ ಶಿಕ್ಷಕನ ಈ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ ದಾವಲ್ ಶೇಡಂ