ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್ ಅಂಬಾನಿ ಅವರು ಕೇರಳದ ಅತ್ಯಂತ ಪ್ರಸಿದ್ಧ ದೇವಾಲಯ ಗಳಾದ ತಳಿಪರಂಬ ರಾಜರಾಜೇಶ್ವರ ದೇವಸ್ಥಾನ ಮತ್ತು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಈ ಎರಡು ದೇವಾಲಯಗಳಿಗೆ ತಲಾ 3 ಕೋಟಿ ರೂ.ಗಳಂತೆ 6 ಕೋಟಿ ರೂ.ಗಳನ್ನು ದೇಣಿಗೆಯಾಗಿ ಸಮರ್ಪಿಸಿದರು.
ಇನ್ನು ರಾಜರಾಜೇಶ್ವರ ದೇಗುಲದ ನವೀಕರಣಕ್ಕಾಗಿ 12 ಕೋಟಿ ರೂ.ಗಳ ಆರ್ಥಿಕ ನೆರವನ್ನು ಘೋಷಿಸಿದರು. ಗುರುವಾಯೂರು ಶ್ರೀ ಕೃಷ್ಣನ ಸನ್ನಿಧಾನದಲ್ಲಿರುವ ಆನೆಗಳ ಕ್ಷೇಮಾ ಭಿವೃದ್ಧಿಗಾಗಿ ಹೆಚ್ಚುವರಿ ಆರ್ಥಿಕ ನೆರವನ್ನು ಅನಂತ್ ಅಂಬಾನಿ ಪ್ರಕಟಿಸಿದರು.
ಏಪ್ರಿಲ್ 2ರಂದು ರಾತ್ರಿ 8 ಗಂಟೆಗೆ ತಳಿಪರಂಬದ ಐತಿಹಾಸಿಕ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅನಂತ್ ಅಂಬಾನಿ ಅವರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರು ಸಾಂಪ್ರದಾಯಿಕ ಸೇವೆಗಳಾದ ಪೊನ್ನುಂಕುಡಂ, ಪಟ್ಟಂ, ತಾಲಿ, ನೆಯ್ನಾಮೃತು ಅರ್ಪಿಸಿ ಅಶ್ವಮೇಧ ನಮಸ್ಕಾರವನ್ನು ನೆರವೇರಿಸಿದರು.
ದೇವಾಲಯದ ಪ್ರಸ್ತುತ ನಡೆಯುತ್ತಿರುವ ನವೀಕರಣ ಕಾಮಗಾರಿಗಳಿಗಾಗಿ ಮೊದಲ ಹಂತದಲ್ಲಿ 3 ಕೋಟಿ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು. ರಾಜರಾಜೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಅಂಬಾನಿ ಅವರು ಒಟ್ಟು 12 ಕೋಟಿ ರೂಪಾಯಿಗಳ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ.
ಈ ದೇಣಿಗೆಯಿಂದ ದೇವಸ್ಥಾನದ ಪುರಾತನ ಪೂರ್ವ ಗೋಪುರವನ್ನು ಪುನರ್ ನಿರ್ಮಿಸಲಾಗುವುದು. ಸುಮಾರು ಎರಡು ಶತಮಾನಗಳಿಂದ ಶಿಥಿಲಾವಸ್ಥೆ ಯಲ್ಲಿದ್ದ ಈ ಗೋಪುರವು ದೇವಸ್ಥಾನದಷ್ಟೇ ಪುರಾತನವಾದ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಹೊಂದಿದೆ.




