Ad imageAd image

ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ,ಅಥಣಿ ಪಟ್ಟಣದ ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಒತ್ತಾಯ .

Bharath Vaibhav
ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ,ಅಥಣಿ ಪಟ್ಟಣದ ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಒತ್ತಾಯ .
WhatsApp Group Join Now
Telegram Group Join Now

ಅಥಣಿ :-ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಎಂಬ ಯುವತಿಯನ್ನ ಕೊಲೆ ಮಾಡಿದ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅಥಣಿ ತಾಲೂಕ ಕೋಳಿ, ಅಂಬಿಗ ಸಮಾಜದ ಅಧ್ಯಕ್ಷ ಎಸ್ ಕೆ ಹೊಳೆಪ್ಪನವರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಅವರು ಅಥಣಿ ಪಟ್ಟಣದಲ್ಲಿ ಶನಿವಾರ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಹುಬ್ಬಳ್ಳಿಯ ಕಾಲೇಜ್ ಆವರಣದಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ಓಣಿಯಲ್ಲಿನ ನಿವಾಸಿಯಾಗಿದ್ದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿ ಗಿರೀಶ್ ಸಾವಂತನಿಗೆ ಗಲ್ಲು ಶಿಕ್ಷೆಯಾಗಬೇಕು. ಅಂಜಲಿ ತಂದೆ ತಾಯಿಯನ್ನು ಕಳೆದುಕೊಂಡ ಯುವತಿ ಅಜ್ಜಿಯ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು. ಅವಳಿಗೆ ಇಬ್ಬರು ಸಹೋದರಿಯರಿದ್ದು, ಅವಳನ್ನ ಕಳೆದುಕೊಂಡ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕುಟುಂಬಕ್ಕೆ ರಕ್ಷಣೆ ನೀಡುವುದರ ಜೊತೆಗೆ ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಎಚ್ ಶಿವರಾಮೇಗೌಡ ಕರವೇ ಬಣದ ಅಧ್ಯಕ್ಷ ಅಣ್ಣಾಸಾಬ ತೆಲಸoಗ ಮಾತನಾಡಿ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಮೇಲಿಂದ ಮೇಲೆ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗುತ್ತಿದೆ. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ದಿಟ್ಟ ನಿರ್ಧಾರ ತೆಗೆದುಕೊಂಡು ಪೊಲೀಸ್ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಕುರಿತು ಪರಿಶೀಲನೆ ಮಾಡಬೇಕು. ಅಂಜಲಿ ಕುಟುಂಬದವರು ಪೊಲೀಸ್ ಠಾಣೆಗೆ ಮುಂಚಿತವಾಗಿ ದೂರು ನೀಡಿದರು ತಾನಾಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ ವಹಿಸಿದ್ದರಿಂದ ಇಂತಹ ಘಟನೆ ಎದುರಿಸಬೇಕಾಗಿತ್ತು. ಆದ್ದರಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊಲೆ ಸುಲಿಗೆ ದರೋಡೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ ರಾಜ್ಯದಲ್ಲಿ ಇಂದು ನಮ್ಮ ಶಾಲೆಯ ಮಕ್ಕಳು ನಿರ್ಭೀತಿಯಿಂದ ಶಾಲೆಗೆ ಹೋಗಿ ಬರುತ್ತಾರೆ ಎನ್ನುವ ವಾತಾವರಣ ಇಲ್ಲದಂತಾಗಿದೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವ ಈ ಕೊಲೆ ಪ್ರಕಟಗಳಿಗೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಕುಸಿದು ಹೋಗಿರುವ ಕಾನೂನು ವ್ಯವಸ್ಥೆಯನ್ನು ಸರ್ಕಾರ ಕೂಡಲೇ ಸರಿಪಡಿಸಿ ಅಂಜಲಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕೊಲೆ ಆರೋಪಿಯನ್ನು ಬಂಧಿಸಿ ಆತನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸಿದರು.

ಅಥಣಿ ಪಟ್ಟಣದ ಶಿವಯೋಗಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಕೆಲ ಹೊತ್ತು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಮ್ ಬಿ ಚಿಪ್ಪಾಡಿ, ಪ್ರಕಾಶ ಕೋಳಿ, ವಿಲಾಸ ಕುಲಕರ್ಣಿ, ಧನಪಾಲ ಸನದಿ , ಚೆನ್ನಯ್ಯ ಇಟನಾಳಮಠ, ಶ್ರೀಪಾದ ಕುಲಕರ್ಣಿ, ರಾಜು ಬಡಿಗೇರ, ಜಗನ್ನಾಥ ಬಾಮನೆ, ಪ್ರಕಾಶ್ ಗಸ್ತಿ, ರಾಜು ವಾಘಮೋರೆ, ಹಣಮಂತ ಅವಟಿ, ಶಬ್ಬೀರ ಸಾತಬಚ್ಚಿ, ಅಭಯ ಕೊಪ್ಪ, ಸುಭಾಷ್ ಗಸ್ತಿ, ಮಂಜು ಹೋಳಿಕಟ್ಟಿ, ಎಂ ಜೆ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ: ರಾಜು. ಎಮ್. ವಾಘಮಾರೆ.

WhatsApp Group Join Now
Telegram Group Join Now
Share This Article
error: Content is protected !!