ಚೇಳೂರು : ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಾವಿರಾರು ಭಕ್ತಾದಿಗಳ ನಡುವೆ ಅದ್ಧೂರಿಯಾಗಿ ರಥೋತ್ಸವ ನಡೆಯಿತು.
ಭಕ್ತಾದಿಗಳ ಸಹಕಾರದಲ್ಲಿ ದೇವಸ್ಥಾನ ಹಾಗೂ ರಥೋತ್ಸವಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಆಂಜನೇಯ, ಶ್ರೀರಾಮ, ಲಕ್ಷ್ಮಣ, ಸೀತೆಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕುಂಭವನ್ನು ಹೊತ್ತು ತಂದ ಭಕ್ತರು ರಥಕ್ಕೆ ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಿದರು.
ಮಂದಿರದಿಂದ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ನಂತರ ರಥದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪಿಸಿ, ಸಂಭ್ರಮ ಸಡಗರದಿಂದ ರಥ ಎಳೆಯುವಾಗ ಜೈ ಶ್ರೀರಾಮ್ ಎಂದು ಭಕ್ತಾದಿಗಳು ಜಯಘೋಷ ಕೂಗಿ ಎಳೆದರು ರತಕ್ಕೆ ಉತ್ತುತ್ತಿ, ಮಂಡಕ್ಕಿ , ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಆಂಜನೇಯ ದೇವಸ್ಥಾನದಿಂದ ಹೊರಟ ರಥವನ್ನು ಮದ್ಯಮ್ಮ ದೇವಸ್ಥಾನ ಹೋಗುವ ರಸ್ತೆಯ(ವೈಶ್ಯ ಬಜಾರ್) ತನಕ ಎಳೆಯಲಾಯಿತು.ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರು ಸಂಜೆ ಆಂಜನೇಯ ಸ್ವಾಮಿ ರಥವನ್ನು ಮರಳಿ ಮೂಲಸ್ಥಾನದ ತನಕ ಎಳೆದರು. ನಂತರ ದೇವರನ್ನು ಪಲ್ಲಕ್ಕಿಯ ಮೂಲಕ ಪುನಃ ಮಂದಿರದೊಳಗೆ ಕೊಂಡೊಯ್ಯಲಾಯಿತು.
ರಥೋಸ್ಥವ ವೇಳೆ ಬಾಜ ಭಜಂತ್ರಿಯ ಜತೆಗೆ ತಮಟೆ ಸದ್ದಿನ ಕುಣಿತ ಕಣ್ಮನ ಸೆಳೆಯಿತು. ಮಹಿಳೆಯರು ಆರತಿ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು.
ರಥೋತ್ಸವ ಅಂಗವಾಗಿ ದೇವರಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಹವನಗಳನ್ನು ಅರ್ಚಕರು ನೆರವೇರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಇದೆ ವೇಳೆ ಭಕ್ತರಿಗೆ ದಾನಿಗಳಿಂದ ವಿಶೇಷ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಚೇಳೂರು ಪೊಲೀಸ್ ಇಲಾಖೆಯಿಂದ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದಬಸ್ತ್ ಮಾಡಲಾಗಿತ್ತು.
ವರದಿ :ಯಾರಬ್. ಎಂ