ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ವಿಚಿತ್ರ ಶೈಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದ್ದು, ಈ ವಿಚಾರವಾಗಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.
ಆಡಳಿತ ಪಕ್ಷ ಡಿಎಂಕೆ ವಿರುದ್ಧ ಬಿಜೆಪಿ ಸೇರಿ ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಇಂದು ತಮ್ಮ ಪ್ರತಿಭಟನೆಯ ಸಂಕೇತವಾಗಿ ಹಲವು ಬಾರಿ ಚಾಟಿಯೇಟು ತಮಗೆ ತಾವೇ ಹೊಡೆದುಕೊಂಡಿದ್ದಾರೆ.
ಘಟನೆಯಾಗಿ ಎರಡು ದಿನಗಳೇ ಕಳೆದರೂ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅಲ್ಲದೆ ಆಸಕ್ತಿ ಕೂಡ ತೋರುತ್ತಿಲ್ಲ. ಅಲ್ಲದೆ ಡಿಎಂಕೆ ಸರ್ಕಾರ ಮತ್ತು ಪೊಲೀಸರು ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಹಾಗು ಆಕೆಯ ಘನತೆಗೆ ಧಕ್ಕೆ ತಂದಿದ್ದಾರೆ. ಇದು ಆಡಳಿತದ ಅಸಮರ್ಥತೆಯನ್ನು ಪ್ರತಿಬಿಂಬಿಸುವ ನಾಚಿಕೆಗೇಡಿನ ಕೃತ್ಯ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಡ ಡಿಎಂಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ರಾಜ್ಯ ಸರ್ಕಾರವನ್ನು ತೊಲಗುವವರೆಗೆ ಚಪ್ಪಲಿ ಧರಿಸುವುದಿಲ್ಲ ಹಾಗೂ ಕೆಟ್ಟ ಶಕ್ತಿಯನ್ನು ಕಿತ್ತೊಗೆಯಲು 48 ದಿನ ಮುರುಗನ್‌ಗೆ ಉಪವಾಸ ಮಾಡ್ತೀನಿ ಎಂದು ಶಪಥ ಗೈದಿದ್ದರು.
ಡಿಎಂಕೆ ಸರ್ಕಾರ ಕಿತ್ತೊಗೆಯೋವರೆಗೂ ನಾನು ಬರೀಗಾಲಲ್ಲಿ ನಡೆಯುತ್ತೇನೆ. ಇದೆಲ್ಲವನ್ನೂ ಜನರು ಗಮನಿಸಬೇಕು. ಎಲ್ಲಾ ಸಂದರ್ಭದಂತೆ ನಾವು ಚುನಾವಣೆಯನ್ನು ಗೆಲ್ಲಲು ಹಣವನ್ನು ಹಂಚಲ್ಲ. ನಾವು ಯಾವುದೇ ಹಣವನ್ನು ಹಂಚದೇ ಚುನಾವಣೆಯಲ್ಲಿ ಹೋರಾಟ ಮಾಡ್ತೀವಿ ಎಂದು ಅಣ್ಣಾಮಲೈ ಹೇಳಿದರು.