ಬಾಗಲಕೋಟೆ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ಗಾಗಿ ಭಾರೀ ಬೇಡಿಕೆ ಇದೆ. ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 23 ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ.
ಎಚ್.ವೈ.ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ.ಮೇಟಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂಬುದು ಬೇಡಿಕೆಯಾಗಿದೆ. ಆದರೆ ಕುಟುಂಬದಲ್ಲಿ ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಒಂದು ವೇಳೆ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿಲ್ಲ ಎಂದರೆ ತಮ್ಮ ಹೆಸರು ಪರಿಗಣಿಸಿ ಎಂದು ಹಲವು ನಾಯಕರು ಕಾಂಗ್ರೆಸ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ಕಾಂಗ್ರೆಸ್ ಅಂತಿಮ ತೀರ್ಮಾನ ಮಾಡಿಲ್ಲ.
ಟಿಕೆಟ್ಗಾಗಿ ಬೇಡಿಕೆ: ರಕ್ಷಿತಾ ಭರತಕುಮಾರ ಈಟಿ ಒಂದು ವೇಳೆ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿಲ್ಲ ಎಂದರೆ ತಮ್ಮ ಹೆಸರು ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ. ಕೆಪಿಸಿಸಿ ರಾಜ್ಯ ಸದಸ್ಯೆಯಾದ ರಕ್ಷಿತಾ ಅವರು ಎಂ.ಎಸ್.ಈಟಿ ಫೌಂಡೇಶನ್ಸ್ ಕಾರ್ಯದರ್ಶಿಗಳು.
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ದಿವಂಗತ ಎಚ್.ವೈ. ಮೇಟಿ ಅವರ ಪುತ್ರರಾದ ಮಲ್ಲಿಕಾರ್ಜುನ, ಉಮೇಶ್, ಪುತ್ರಿಯರಾದ ಬಾಯಕ್ಕ ಮತ್ತು ಮಹಾದೇವಿ ಅವರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು.
ಉಪ ಚುನಾವಣೆಗೆ ಕೆಪಿಸಿಸಿ ಸಮಿತಿ ರಚನೆ ಮಾಡಿದ್ದು, ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಸಮಿತಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಸಮಿತಿಯ ಸದಸ್ಯರ ಜೊತೆ ಮಹತ್ವದ ಸಭೆ ನಡೆಸಿ, ಚುನಾವಣೆಯ ಸಮಗ್ರ ಕಾರ್ಯತಂತ್ರ ರೂಪಿಸುವ ಕುರಿತು ವಿವರವಾದ ಚರ್ಚೆ ನಡೆಸಿದರು.
ಉಪ ಚುನಾವಣೆಗೆ ರಕ್ಷಿತಾ ಭರತಕುಮಾರ ಈಟಿ, ವೀಣಾ ಕಾಶಪ್ಪನವರ್, ಎಚ್.ವೈ.ಮೇಟಿ ಪುತ್ರಿಯರಾದ ಬಾಯಕ್ಕ ಮತ್ತು ಮಹಾದೇವಿ ಮೇಟಿ ಟಿಕೆಟ್ ಆಕಾಂಕ್ಷಿಗಳು.
ಇನ್ನು ಎಚ್.ವೈ.ಮೇಟಿ ಪುತ್ರರಾದ ಮಲ್ಲಿಕಾರ್ಜುನ, ಉಮೇಶ್ ಮೇಟಿ ಸಹ ಟಿಕೆಟ್ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ? ಎಂಬುದು ಇನ್ನೂ ಸಹ ಅಂತಿಮವಾಗಿಲ್ಲ.




