ಬೆಳಗಾವಿ: ತಹಶೀಲ್ದಾರ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಪ್ತ ಸಹಾಯಕ ಸೋಮು ದೊಡವಾಡಿ, ತಹಶೀಲ್ದಾರ ಬಸವರಾಜ ನಾಗರಾಳ, ತಹಶೀಲ್ದಾರ್ ಕಚೇರಿಯ ಎಫ್‌ಡಿಎ ಅಶೋಕ ಕಬ್ಬಲಿಗೇರಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಬೆಳಗಾವಿ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ತಹಶೀಲ್ದಾರ ಬಸವರಾಜ ನಾಗರಾಳ ಪರ ನ್ಯಾಯವಾದಿ ರವಿರಾಜ ಪಾಟೀಲ ವಕಾಲತ್ತು ವಹಿಸಿದ್ದರು. ಎಫ್ ಡಿಎ ಅಶೋಕ ಕಬ್ಬಲಿಗೇರ ಪರ ವಕೀಲ ಆರ್.ಜಿ. ಪಾಟೀಲ, ಸೋಮು ದೊಡವಾಡಿ ಪರ ವಕೀಲೆ ಪದ್ಮಾ ವಕಾಲತ್ತು ವಹಿಸಿದ್ದರು.
ನ.5ರಂದು ತಹಶಿಲ್ದಾರ ಕಚೇರಿಯ ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡು ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಮೂವರ ಹೆಸರು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದರು. ಈ ಬಗ್ಗೆ ಮೂವರ ವಿರುದ್ಧ ಖಡೇಬಜಾರ ಠಾಣೆಯಲ್ಲಿ ದೂರು ದಾಖಲಾಗಿತ್ತು.