ತುರುವೇಕೆರೆ : ಬಿಪಿಎಲ್ ಪಡಿತರ ಚೀಟಿ ಪಡೆಯಲು ಸರ್ಕಾರ ರೂಪಿಸಿದ್ದ ಕೆಲವು ನಿಯಮ, ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿದ್ದ ಪಡಿತರ ಚೀಟಿಗಳನ್ನು ಆಹಾರ ಇಲಾಖೆ ರದ್ದುಪಡಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಬಿಪಿಎಲ್ ಪಡಿತರ ಚೀಟಿ ರದ್ದಾದರೆ ಕೇವಲ ಅನ್ನಭಾಗ್ಯ ಯೋಜನೆ ಮಾತ್ರವಲ್ಲ, ಸರ್ಕಾರದ ಇನ್ನಿತರ ಯೋಜನೆಗಳ ಅನುಕೂಲದಿಂದಲೂ ಕುಟುಂಬಗಳು ವಂಚಿತವಾಗುವ ಆತಂಕ ಎದುರಾಗಿದ್ದು, ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
ಈಗಾಗಲೇ ಬಿಪಿಎಲ್ ಪಡಿತರ ಚೀಟಿ ಹೊಂದಿ, ಸಾಕಷ್ಟು ವರ್ಷಗಳಿಂದ ಪಡಿತರ ಪಡೆಯುತ್ತಿದ್ದವರು ಈಗ ಸರ್ಕಾರದ ನಿಯಮಾವಳಿಗಳಿಂದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ ಕುಟುಂಬ) ಇಂದ ಎಪಿಎಲ್ ಗೆ (ಬಡತನ ರೇಖೆಗಿಂತ ಮೇಲ್ಪಟ್ಟವರು) ತಮ್ಮ ಪಡಿತರ ಚೀಟಿ ಬದಲಾವಣೆಗೊಂಡು ಪಡಿತರ ಪಡೆಯದಂತಾಗಿರುವುದು ಇಲಾಖೆಯ ಮೇಲೆ ಕೋಪಕ್ಕೆ ಕಾರಣವಾಗಿದೆ. ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ವಿತರಿಸುತ್ತಿದ್ದು, ಅನರ್ಹ ಪಡಿತರ ಚೀಟಿದಾರರು ಹೆಚ್ಚಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಆಹಾರ ಇಲಾಖೆ ಮೂಲಕ ತಾನು ನಿಗದಿಪಡಿಸಿದ್ದ ನಿಯಮಾವಳಿ, ಮಾನದಂಡ ಉಲ್ಲಂಘಿಸಿ ಪಡೆದಿರುವ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲು ಆದೇಶಿಸಿದೆ.
ತುರುವೇಕೆರೆ ತಾಲ್ಲೂಕಿನಲ್ಲಿ ೩೫೦೩ ಅಂತ್ಯೋದಯ ಪಡಿತರ ಚೀಟಿಗಳಿಂದ 14,870 ಮಂದಿ, 5277 ಎಪಿಎಲ್ ಕಾರ್ಡಿನಿಂದ 17,415 ಮಂದಿ, 39658 ಬಿಪಿಎಲ್ ಪಡಿತರ ಚೀಟಿಗಳಿಂದ 1,35,024 ಮಂದಿ ಫಲಾನುಭವಿಗಳಿದ್ದಾರೆ. ಒಟ್ಟಾರೆ ತುರುವೇಕೆರೆ ತಾಲ್ಲೂಕಿನಲ್ಲಿ ತುರುವೇಕೆರೆ ಪಟ್ಟಣದಲ್ಲಿ 6, ಗ್ರಾಮೀಣ ಪ್ರದೇಶದ 70 ನ್ಯಾಯಬೆಲೆ ಅಂಗಡಿಗಳಿಂದ 48,438 ಪಡಿತರ ಚೀಟಿದಾರರಿದ್ದಾರೆ. 1,67,309 ಮಂದಿ ಫಲಾನುಭವಿಗಳಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಶೇ. 76.04, ನಗರ ಪ್ರದೇಶದಲ್ಲಿ ಶೇ. 49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಪಡಿತರ ಚೀಟಿ ನೀಡಬೇಕೆಂಬ ನಿಯಮವಿದೆ. ಆದರೆ ರಾಜ್ಯದಲ್ಲಿ ಪ್ರಸ್ತುತ 3,83,29,981 ಫಲಾನುಭವಿಗಳಿಗೆ 1,16,51,209 ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗಿದೆ. ಒಟ್ಟಾರೆ ನಿಗದಿಗಿಂತ ಹೆಚ್ಚುವರಿಯಾಗಿ ಅಂದಾಜು 13 ಲಕ್ಷ ಪಡಿತರ ಚೀಟಿ ವಿತರಿಸಲಾಗಿದ್ದು, ಈ ಎಲ್ಲಾ ಪಡಿತರ ಚೀಟಿಗೆ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ನೀಡುತ್ತಿದ್ದು, ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳುತ್ತಿದೆ. ಅನ್ನಭಾಗ್ಯ ಯೋಜನೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಸರ್ಕಾರ ಈಗಾಗಲೇ ರಾಜ್ಯದ ಬಡಜನರ ಹಸಿವು ನೀಗಿಸಬೇಕೆಂಬ ಉದ್ದೇಶದಿಂದ ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಗೆ ಅಕ್ಕಿ ವಿತರಿಸಲು ಹೆಚ್ಚು ಹಣ ಪಾವತಿಸಿ ಅಕ್ಕಿ ಖರೀದಿ ಮಾಡಿ ನ್ಯಾಯಬೆಲೆ ಅಂಗಡಿ ಮೂಲಕ ಉಚಿತವಾಗಿ ನೀಡುತ್ತಿದೆ. ಸರ್ಕಾರ ನಿರ್ಗತಿಕರಿಗೆ ಅಂತ್ಯೋದಯ, ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್, ಬಡತನ ರೇಖೆಗಿಂದ ಮೇಲ್ಪಟ್ಟವರಿಗೆ ಎಪಿಎಲ್ ಕಾರ್ಡ್ ನೀಡಿದೆ. ಸದ್ಯ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ನೀಡುತ್ತಿದೆ.
ಸರ್ಕಾರ ನಿಯಮಾವಳಿಗಳು ಕಳೆದ 20 ವರ್ಷದ ಹಿಂದೆ ರೂಪಿಸಿದ್ದು ಎನ್ನಲಾಗುತ್ತಿದೆ. ಆ ನಿಯಮಗಳನ್ನು ಮಾಡಿದ್ದ ಕಾಲಕ್ಕೂ ಪ್ರಸ್ತುತ ಕಾಲದ ಪರಿಸ್ಥಿತಿ, ವ್ಯವಹಾರ, ಆರ್ಥಿಕ ಸ್ಥಿತಿ ಎಲ್ಲದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪ್ರಸ್ತುತ ಸಮಾಜದಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಟಿವಿ, ದ್ವಿಚಕ್ರ ವಾಹನಗಳಿದೆ. ಬಹುತೇಕ ಕುಟುಂಬಗಳು ಕಾರನ್ನು ಹೊಂದಿವೆ. ವರ್ಷದಿಂದ ವರ್ಷಕ್ಕೆ ಜನರ ಆದಾಯವೂ ಹೆಚ್ಚುತ್ತಿದೆ. ಗಾರೆ ಕೆಲಸ, ಕೂಲಿ ಮಾಡುವವರ ದಿನದ ಸಂಪಾದನೆ ಕನಿಷ್ಠ 500 ರಿಂದ 800 ರೂ, ತಿಂಗಳಿಗೆ 15 ರಿಂದ 20 ಸಾವಿರ, ವರ್ಷಕ್ಕೆ ಕನಿಷ್ಠ 2 ಲಕ್ಷ ಆದಾಯವಿದೆ. ವರ್ಷದಿಂದ ವರ್ಷಕ್ಕೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಬಡ ಮತ್ತು ಮಧ್ಯಮ ಕುಟುಂಬಗಳು ಮನೆ ನಿರ್ವಹಣೆ, ಮಕ್ಕಳ ವಿದ್ಯಾಬ್ಯಾಸ ಇನ್ನಿತರೆ ಕೌಟುಂಬಿಕ ನಿರ್ವಹಣೆಗೆ ಇಂದಿಗೂ ಹೆಣಗಾಡುತ್ತಿವೆ. ಅಂತಹುದರಲ್ಲಿ ಸರ್ಕಾರ ತನ್ನ ಮಾನದಂಡಗಳ ಅನ್ವಯ ಬಿಪಿಎಲ್ ರದ್ದುಪಡಿಸಿದರೆ ಬಹುತೇಕ ಕುಟುಂಬಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತವಾಗಲಿದೆ. ಸರ್ಕಾರದ ನಿಯಮದಿಂದ ಅರ್ಹ ಫಲಾನುಭವಿಗಳಿಗೂ ತೊಂದರೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಮಾನದಂಡ ಪರಿಷ್ಕರಣೆ ಮಾಡದೆ ಹಿಂದಿನ ನಿಯಮಾವಳಿಯ ಆಧಾರದ ಮೇಲೆ ಬಿಎಪಿಎಲ್ ಪಡಿತರ ಚೀಟಿ ರದ್ದುಪಡಿಸಲು ಮುಂದಾಗಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಮಾನದಂಡಗಳು : ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ,ಮಂಡಳಿಗಳು ,ನಿಗಮಗಳು ಸ್ವಾಯತ್ತ ಸಂಸ್ಥೆಗಳು ಇತ್ಯಾದಿ, ಒಳಗೊಂಡಂತೆ ಆದಾಯ ತೆರಿಗೆ ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು. ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.




